

ಶಿರಸಿ: ಅಡಕೆ ಬೆಳೆಯುವ ಕ್ಷೇತ್ರದ ಸಂಸದರು ಹಾಗೂ ಸಹಕಾರಿ ಸಂಘಗಳ ಪ್ರಮುಖರು ಕೃಷಿ ಸಚಿವ ಶಿವರಾಜಸಿಂಗ್ ಚೌವ್ಹಾಣ ಅವರನ್ನು ಬುಧವಾರ ಭೇಟಿಯಾಗಿ ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರು.
ಹೊಸದಿಲ್ಲಿಯ ಕೃಷಿ ಭವನದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ (ಶಿವಮೊಗ್ಗ ಕ್ಷೇತ್ರ ), ವಿಶ್ವೇಶ್ವರ ಹೆಗಡೆ ಕಾಗೇರಿ(ಉತ್ತರ ಕನ್ನಡ ಕ್ಷೇತ್ರ), ಕ್ಯಾಪ್ಟನ್ ಬ್ರಿಜೇಶ ಚೌಟ್(ಮಂಗಳೂರು ಕ್ಷೇತ್ರ) ಹಾಗೂ ಕೋಟ ಶ್ರೀನಿವಾಸ ಪೂಜಾರಿ(ಉಡುಪಿ, ಚಿಕ್ಕಮಗಳೂರು ಕ್ಷೇತ್ರ) ಮುಂದಾಳತ್ವದಲ್ಲಿ ಭೇಟಿ ಮಾಡಲಾಯಿತು.
ಅಡಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಕುರಿತು ಕೃಷಿ ಸಚಿವರ ಗಮನ ಸೆಳೆಯಲಾಯಿತು. ಅಕ್ರಮ ಆಮದು ಅಡಕೆಯನ್ನು ತಡೆಯಬೇಕು. ಎಫ್‌ಎಸ್‌ಎಸ್‌ಐ ನಿರ್ದಿಷ್ಟ ಪಡಿಸಿದ ಅಡಕೆ ತೇವಾಂಶ ಪ್ರಮಾಣ ಶೇ.7ರಿಂದ ಶೇ.11ಕ್ಕೆ ಹೆಚ್ಚಿಸಬೇಕು. ಮೈಲು ತುತ್ತದ ಮೇಲೆ ವಿಧಿಸುವ ಜಿಎಸ್‌ಟಿಯನ್ನು ಶೇ. 18ರಿಂದ ಶೇ.5ಕ್ಕೆ ಇಳಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಡಕೆ ಬೆಳೆಗಾರರು ಎದುರುಸುತ್ತಿರುವ ಸಮಸ್ಯೆಗಳ ಪರಿಹಾರ ಕುರಿತು ಗಮನಹರಿಸುವುದಾಗಿ ಭರವಸೆ ನೀಡಿದ್ದಾರೆ. ಸಹಕಾರಿ ಧುರೀಣ ಶಿವಮೊಗ್ಗದ ಎಚ್.ಎಸ್. ಮಂಜಪ್ಪ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಇದ್ದರು ಎಂದು ಟಿಎಸ್‌ಎಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.