

ರಾಯಚೂರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ನೋಂದಾಯಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೊಟ್ಟೂರು ಬಸಪ್ಪ ಹೇಳಿದರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025 ದ್ವಿತೀಯ ಪಿಯುಸಿ ಪರೀಕ್ಷಾ-2ಕ್ಕೆ ಅವಕಾಶ ಕಲ್ಪಿಸಿದ್ದರಿಂದ ರಾಜ್ಯದಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಂತೆ ರಾಯಚೂರು ಜಿಲ್ಲೆಯಲ್ಲಿ 6,788 ವಿದ್ಯಾರ್ಥಿಗಳ ಪೈಕಿ 1625 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರತಿಶತ 23.09 ಫಲಿತಾಂಶ ಬಂದಿದೆ.
ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೂರನೇ ಪರೀಕ್ಷೆ-3ಯನ್ನು ಜೂನ್ 09 ರಿಂದ 20ರವರೆಗೆ ನಡೆಸಲಾಗುತ್ತದೆ. ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಮೇ 28 ಅಂತಿಮ ದಿನಾಂಕವಾಗಿದ್ದು, ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ವಿದ್ಯಭ್ಯಾಸ ಮುಂದುವರಿಸಬೇಕು ಎಂದರು.
ಫಲಿತಾಂಶ ಕುಸಿಯಲು ವಾಸ್ತವವಾಗಿ ಗಂಭೀರ ಕಾರಣಗಳೇನು ಎಂಬುದು ಎಲ್ಲ ಪ್ರಾಂಶುಪಾಲರಿಗೆ ತಿಳಿದ ವಿಷಯವಾಗಿರುತ್ತದೆ. ಆದ್ದರಿಂದ ಎಲ್ಲ ಪ್ರಾಂಶುಪಾಲರು ಜಾಗೃತರಾಗಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಆಲೋಚಿಸಿ ಕಾರ್ಯತತ್ಪರರಾಗಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು 3ನೇ ಪರೀಕ್ಷೆಗೆ ನೋಂದಾಯಿಸಿ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಸೋಮಶೇಖರಪ್ಪ ಹೋಕ್ರಾಣಿ, ಡಾ.ಕುಂಟಪ್ಪ, ಸುಧಾ ಎಂ.ಎ ಇದ್ದರು.