

ನರಗುಂದ: ಕಡಲೆ ಬೆಳೆಗೆ ಪ್ರೋತ್ಸಾಹಧನದ ಅಗತ್ಯವಿದೆ. ಮುಂಗಾರು ಬೆಳೆಗೆ ನೀರು ದೊರೆಯದೆ ಮತ್ತು ಅಕಾಲಿಕ ಮಳೆಯಿಂದ ರೈತರು ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಕಡಲೆ ಬೆಳೆಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದಿಂದ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು.
ತೊಗರಿಗೆ ಬೆಂಬಲ ಬೆಲೆ ಕಡಿಮೆಗೊಳಿಸಿದ್ದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ರೈತರ ಮನವಿಗೆ ಸ್ಪಂದಿಸಿ 500 ರೂ. ಪ್ರೋತ್ಸಾಹಧನ ವಿತರಣೆ ಮಾಡುವ ನಿರ್ಧಾರ ಕೈಗೊಳ್ಳಬೇಕು. ಇದರಿಂದ ತೊಗರಿ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಈ ಭಾಗದ ರೈತರು ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಕಡಲೆ ಬೆಳೆದಿದ್ದಾರೆ. ಎಪಿಎಂಸಿ ದರದ ಪ್ರಕಾರ ಕಡಲೆ ಖರೀದಿ ಕೇಂದ್ರ ಅರಂಭವಾಗುವ ಹಂತದಲ್ಲಿದ್ದು ಕಡಲೆ ಬೆಲೆ ಎಪಿಎಂಸಿ ದರದ ಪ್ರಕಾರ ಪ್ರತಿ ಕ್ವಿಂಟಾಲ್‌ಗೆ 5650 ರೂ. ಇದೆ. ಇದು ಕನಿಷ್ಠ ದರವಾಗಿದೆ. ಯಾವುದೇ ರೈತರಿಗೆ ಈ ದರ ಲಾಭವಾಗುವುದಿಲ್ಲ. ಕಡಲೆ ಬೆಳೆ ಈಗಾಗಲೇ ಇಳುವರಿ ಈ ಭಾಗದಲ್ಲಿ ಕಡಿಮೆಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಕಡಲೆ ಬೆಳೆಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 500 ರೂ ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.