ರೈತರ ವಿವಿಧ ಬೇಡಿಕೆ ಈಡೇರಿಸಲು ಮನವಿ

FARMER
Published on

ಮುಂಡರಗಿ: ತಾಲೂಕಿನ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ 2022-23ರಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಕೆಲ ರೈತರಿಗೆ ಪರಿಹಾರ ನೀಡಿ ಇನ್ನೂ ಹಲವರಿಗೆ ಪರಿಹಾರ ನೀಡಿಲ್ಲ. ಎಲ್ಲ ರೈತರಿಗೆ ಪರಿಹಾರ ಮಂಜೂರು ಮಾಡಬೇಕು. ಮತ್ತು ರೈತರಿಗೆ ಫಸಲ್‌ಬಿಮಾ ಯೋಜನೆಯಡಿ ಎಲ್ಲ ಬೆಳೆಗಳಿಗೆ ಶೇ.25ರಷ್ಟು ಬೆಳೆವಿಮೆ ಹೆಚ್ಚಿಗೆ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳ ಹಾಗೂ ಗ್ರಾಮೀಣ ವಿದ್ಯುತ್ ಶಕ್ತಿಯನ್ನು ಸರ್ಕಾರವು ಖಾಸಗೀಕರಣ ಮಾಡಲು ಹೊರಟಿದ್ದು, ಯಾವುದೆ ಕಾರಣಕ್ಕೂ ಕೃಷಿ ಪಂಪ್‌ಸೆಟ್‌ಗಳನ್ನು ಖಾಸಗೀಕರಣಕ್ಕೆ ನೀಡಬಾರದು. ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಲಾಗಿದೆ.

ತಾಲೂಕಿನ ಪಶು ಚಿಕಿತ್ಸಾಲಯಗಳಿಗೆ ಪಶು ವೈದ್ಯರು ಖಾಲಿ ಇದ್ದು ಕೂಡಲೇ ಪಶು ವೈದ್ಯರನ್ನು ನೇಮಕ ಮಾಡಬೇಕು. ಗುಣಮಟ್ಟದ ಕೃಷಿ ಸಲಕರಣೆ ವಿತರಣೆ ಮಾಡಬೇಕು. ಸಿಂಗಟಾಲೂರ ಏತ ನೀರಾವರಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಯೋಜನೆ ಕೈಗೊಂಡಿದ್ದು ಕಾಮಗಾರಿ ಪೂರ್ಣಗೊಂಡಿಲ್ಲ. ಆದಷ್ಟು ಬೇಗ ತಾಲೂಕಿನಲ್ಲಿ ಸಂಪೂರ್ಣ ನೀರಾವರಿ ಒದಗಿಸಬೇಕು ಎನ್ನುವುದು ಸೇರಿದಂತೆ ಮತ್ತಿತರರ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ನಂತರ ಶಾಸಕರಾದ ಜಿ.ಎಸ್.ಪಾಟೀಲ ಮತ್ತು ಡಾ.ಚಂದ್ರು ಲಮಾಣಿ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡ, ತಾಲೂಕಾಧ್ಯಕ್ಷ ಶಿವಯೋಗಯ್ಯ ಸಸಿಮಠ, ಶಿವಾನಂದ ಇಟಗಿ, ಬಸವರಾಜ ನವಲಗುಂದ, ಚಿನ್ನಪ್ಪ ವಡ್ಡರ, ಬಸಪ್ಪ ವಡ್ಡರ, ಗಣೇಶ ಭರಮಕ್ಕನವರ, ಶಿವಾನಂದ ಇಟಗಿ, ನಿಂಗಪ್ಪ ಭಂಡಾರಿ, ರೇವಣೆಪ್ಪ ಬೀಡನಾಳ, ರವಿಚಂದ್ರ ಮೇಗೂರ, ಶಿವಾಜಿ ಪಾರಪ್ಪನವರ, ಮಂಜಪ್ಪ ಬುರ್ಲಿ, ಸಂತನಿಂಗಪ್ಪ ಬಾಳನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net