

ಕಳಸ: ಕಳಸ ಕಲಶೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಮಳೆಗಾಲದ ಪೂರ್ವದಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆಯಾಗಿ ರಾಜ್ಯದ ರೈತರು ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿ ಪರ್ಜನ್ಯ ಜಪ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಮಳೆ ಹೆಚ್ಚಾಗಿದ್ದು, ಸದ್ಯಕ್ಕೆ ಮಳೆ ನಿಲ್ಲಿಸುವಂತೆ ಕಲಶೇಶ್ವರ ದೇವರಿಗೆ ಗುರುವಾರ ಮೊರೆ ಇಡಲಾಗಿದೆ.
ಕಳಸ ತಾಲೂಕಿನಲ್ಲಿ 20 ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ. ಮಳೆ ಆರ್ಭಟದಿಂದ ಜನರು ಹೈರಾಣಾಗಿದ್ದಾರೆ. ತೋಟಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಆದ್ದರಿಂದ ಸುರಿಯುವ ಮಳೆ ನಿಲ್ಲಿಸಿ ಹದವಾದ ಮಳೆ ಕರುಣಿಸುವಂತೆ ಕಲಶೇಶ್ವರನಲ್ಲಿ ಭಕ್ತರು ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅತಿಯಾದ ಮಳೆಯಿಂದ ಜನ, ಜಾನುವಾರುಗಳ ಜತೆ ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗಿದೆ. ಧರೆ ಕುಸಿತ, ಮರ ಬಿದ್ದು ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅತಿವೃಷ್ಠಿಯಾಗದಂತೆ ಹದವಾದ ಮಳೆ ನೀಡುವಂತೆ ಕಲಶೇಶ್ವರ ಸ್ವಾಮಿಗೆ ಅಗ್ನಿಸೂಕ್ತ ಮಂತ್ರ ಪಠಿಸಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯರಾದ ರಂಗನಾಥ್, ಕಾರ್ತಿಕ್ ಶಾಸಿ, ಸತೀಶ್, ಶ್ರೀಧರ್, ಕಾರ್ಯ ನಿರ್ವಹಣಾಧಿಕಾರಿ ಪ್ರೇಮಲತಾ ಮತ್ತಿತರರಿದ್ದರು.