ಶ್ವಾನ ಸಾಮ್ರಾಜ್ಯಕ್ಕೆ ಬೇಸತ್ತ ಜನತೆ

mkg1a
Published on

ಟಿ.ಎಚ್. ಶಿವಕುಮಾರ್ ಮಲೇಬೆನ್ನೂರು
ಪಟ್ಟಣದ ಹಲವು ವಾರ್ಡುಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವ ಭಯದಲ್ಲಿ ಓಡಾಡುವ ಸ್ಥಿತಿ ಎದುರಾಗಿದೆ.

ಪಟ್ಟಣದ ಮಧ್ಯಭಾಗದ ರಾಜ್ಯ ಹೆದ್ದಾರಿ, ಬಸ್ ನಿಲ್ದಾಣ, ಸಂತೆ ರಸ್ತೆ, ನಂದಿಗುಡಿ ರಸ್ತೆ, ಹರಳಹಳ್ಳಿ ರಸ್ತೆ, ಮಟನ್ ಮಾರುಕಟ್ಟೆ, ಪೊಲೀಸ್ ಕ್ವಾಟರ್ಸ್ ಹೀಗೆ ಎಲ್ಲಿ ನೋಡಿದರೂ ಬೀದಿನಾಯಿಗಳದ್ದೇ ಸಾಮ್ರಾಜ್ಯವಾಗಿದೆ.

ಯಾವುದೇ ಪಾದಚಾರಿ, ಮಕ್ಕಳು, ವಾಹನ ಬಂದರೂ ನಾಯಿಗಳು ಬೆನ್ನಟ್ಟುತ್ತಿವೆ. ಹೀಗಾಗಿ ಜನರು ಬೀದಿಗಳಲ್ಲಿ ಸಂಚರಿಸುವುದಕ್ಕೆ ಹೆದರುತ್ತಿದ್ದಾರೆ. ಪುರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅನೇಕ ವಾಹನ ಸವಾರರು ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅನೇಕ ಪಾದಚಾರಿಗಳು, ಮಕ್ಕಳು, ವಯೋವೃದ್ಧರು, ಮಹಿಳೆಯರು ಬೀದಿನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಘಟನೆಗಳು ಸಾಕಷ್ಟು ನಡೆದಿವೆ.

ಇಷ್ಟಾದರೂ, ಪುರಸಭೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕರು ನಾಯಿ ಉಪಟಳ ತಪ್ಪಿಸುವಂತೆ ಮನವಿ, ಪ್ರತಿಭಟನೆ ಮಾಡಿದಾಗ ಒಂದೆರೆಡು ದಿನ ಹತ್ತಾರೂ ಬೀದಿನಾಯಿಗಳನ್ನು ಹಿಡಿದಂತೆ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಬೀದಿನಾಯಿಗಳ ಕಾಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಯೋಚನೆ ಮಾತ್ರ ಈವರೆಗೆ ಮಾಡಿಲ್ಲ.
ನಾಯಿಗಳನ್ನು ಕೊಲ್ಲುವಂತಿಲ್ಲ: ಬೀದಿ ನಾಯಿ ಹಾವಳಿ ಕುರಿತು ಪಟ್ಟಣದ ನಾಗರಿಕರಿಂದ ಹಲವು ದೂರುಗಳು ಬಂದಿವೆ. ಬೀದಿ ನಾಯಿಗಳನ್ನು ಹಿಡಿಯುವುದಾಗಲೀ, ಕೊಲ್ಲುವುದಾಗಲೀ ಮಾಡುವಂತಿಲ್ಲ.

ಬದಲಿಗೆ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಸೋಂಕು ತಾಗದಂತೆ ಅವುಗಳಿಗೆ ಚಿಕಿತ್ಸೆ ನೀಡಿ ಪೋಷಿಸಿ ನಂತರ ಬಿಡಬೇಕು ಎಂಬ ನಿಯಮವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಪ್ರತಿಕ್ರಿಯಿಸಿದರು.

ಹಾಗಾಗಿ, ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಎರಡು ಬಾರಿ ಟೆಂಡರ್ ಕರೆದರೂ ಯಾರೂ ಮುಂದೆ ಬಂದಿಲ್ಲ. ಈಗ ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು. ಈ ಬಾರಿಯೂ ಯಾರೂ ಸ್ಪಂದಿಸದಿದ್ದಲ್ಲಿ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net