ಬೆಳೆ ನಷ್ಟ ಪರಿಹಾರ ವಿತರಿಸಲು ಮನವಿ

Memorandum to DC
Published on

ಚಿಕ್ಕಮಗಳೂರು: ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆ, ಗಾಳಿ ಮತ್ತು ಪ್ರವಾಹದಿಂದ ಬೆಳೆ ನಷ್ಟ ಅನುಭವಿಸಿರುವ ಎಲ್ಲ ಕೃಷಿಕರಿಗೂ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರವನ್ನು ತಕ್ಷಣ ವಿತರಿಸುವಂತೆ ಮೂಡಿಗೆರೆ ತಾಲೂಕು ಊರುಬಗೆ ಗ್ರಾಪಂ ವ್ಯಾಪ್ತಿಯ ರೈತರು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮತ್ತು ಬಿಎಸ್‍ಪಿ ಜಿಲ್ಲಾ ಸಂಯೋಜಕ ಮರಗುಂದ ಪ್ರಸನ್ನ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿದ ರೈತರು ಈ ಸಂಬಂಧ ಮನವಿ ಸಲ್ಲಿಸಿದರು.

ಕಳೆದ ವರ್ಷದ ಅತಿವೃಷ್ಟಿಯಿಂದ ನಾವು ಬೆಳೆದಿದ್ದ ಕಾಫಿ, ಮೆಣಸು, ಏಲಕ್ಕಿ, ಭತ್ತ, ಬಾಳೆ ಬೆಳೆ ನಾಶವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಅಳಲು ತೋಡಿಕೊಂಡ ರೈತರು ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಧನವನ್ನು ನೆರೆಯ ಹಾಸನ ಜಿಲ್ಲೆಯಲ್ಲಿ ಈಗಾಗಲೇ ವಿತರಿಸಲಾಗಿದೆ ಎಂದು ಗಮನ ಸೆಳೆದರು.

ಕಡಿಮೆ ಮೊತ್ತ ವಿತರಣೆ:
ಊರುಬಗೆ ಗ್ರಾಪಂ ವ್ಯಾಪ್ತಿಯ ಸಂತ್ರಸ್ತ ರೈತರಿಗೆ ಪರಿಹಾರ ನೀಡಿಲ್ಲ. ಬೆರಳೆಣಿಕೆಯ ಕೃಷಿಕರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಅದರಲ್ಲೂ ಕೆಲವರಿಗೆ 800 ರಿಂದ 3 ಸಾವಿರ ರೂ.ನಷ್ಟು ಕಡಿಮೆ ಮೊತ್ತ ವಿತರಿಸಲಾಗಿದೆ ಎಂದು ದೂರಿದರು. ತಾರತಮ್ಯ ಮಾಡದೆ ರಾಜ್ಯ ಸರ್ಕಾರ ನಿಗದಿಪಡಿಸಿದಷ್ಟು ಬೆಳೆ ನಷ್ಟ ಹೊಂದಿದ ಎಲ್ಲ ರೈತರಿಗೂ ಎಕರೆಗೆ 7 ಸಾವಿರ ರೂ.ನಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ರೈತರಾದ ವಾಸುದೇವ್, ಸಂದೀಪ್, ನಿಶಾಂತ್ ಪಟೇಲ್, ಸುಬ್ರಾಯ, ಜಯಣ್ಣ, ಚೇತನ್, ಎಸ್.ಬಿ.ಮೋಹನ್‍ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net