ಕಾರ್ಯದೊತ್ತಡ ಕಡಿಮೆಗೊಳಿಸಲು ಒತ್ತಾಯ: ಕಂದಾಯ ಇಲಾಖೆ ನೌಕರರ ಸಂಘದಿಂದ ಡಿಸಿಗೆ ಮನವಿ

Appeal to DC from Department Employees Union mandya
Published on

ಮಂಡ್ಯ: ಕಂದಾಯ ಇಲಾಖೆ ನೌಕರರಿಗೆ ಕಾರ್ಯ ಒತ್ತಡ ಕಡಿಮೆಗೊಳಿಸುವುದರ ಜತೆಗೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಕಂದಾಯ ಇಲಾಖೆ ನೌಕರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೆರಳಿದ ಸಂಘದ ಪದಾಧಿಕಾರಿಗಳು, ಬೇರೆ ಇಲಾಖೆಯ ಕೆಲಸಗಳನ್ನು ಕಂದಾಯ ಸಿಬ್ಬಂದಿಯಿಂದ ಮಾಡಿಸಲಾಗುತ್ತಿದೆ. ಪ್ರತಿ ರಜೆಯ ದಿನದಲ್ಲಿ ಕಾರ್ಯನಿರ್ವಹಿಸಲು ಹಾಗೂ ಸಂಜೆಯಿಂದ ರಾತ್ರಿ ಸಮಯದಲ್ಲಿ ಗೂಗಲ್ ಮೀಟಿಂಗ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆದ್ದರಿಂದ ಪ್ರತಿ ಸಾರ್ವಜನಿಕ ರಜೆಯ ದಿನಗಳಲ್ಲಿಯೂ ಕೆಲಸ ಮಾಡುವಂತೆ ಒತ್ತಡ ಹಾಕುತ್ತಿರುವುದನ್ನು ಕೈಬಿಡಬೇಕು. ರಾಜ್ಯದಲ್ಲಿ ಸುಮಾರು 4 ಸಾವಿರ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಖಾಲಿ ಇದ್ದು, ಅದನ್ನು ತ್ವರಿತವಾಗಿ ಭರ್ತಿ ಮಾಡುವ ಮೂಲಕ ಹಾಲಿ ನೌಕರರ ಕಾರ್ಯ ಒತ್ತಡ ಕಡಿಮೆ ಮಾಡಬೇಕು. ಕುಟುಂಬದ ಸಮಸ್ಯೆ ಆರೋಗ್ಯ ಸಮಸ್ಯೆ ಇರುವ ನೌಕರರುಗಳಿಗೆ ಅಂತರ ಜಿಲ್ಲಾ ವರ್ಗಾವಣೆಯನ್ನು ಮರು ಜಾರಿಗೊಳಿಸುವುದು ಅಥವಾ ನಿಯೋಜನೆ ಮಾಡಲು ಅವಕಾಶ ನೀಡಬೇಕು. ಸಿವಿಲ್ ವ್ಯಾಜ್ಯ ಪ್ರಕರಣಗಳಲ್ಲಿ ಪೊಲೀಸರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಂದಾಯ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸುತ್ತಿದ್ದು, ಇದನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.

ನೌಕರ ಸಂಘದ ಜಿಲ್ಲಾಧ್ಯಕ್ಷ ಡಿ.ತಮ್ಮಣ್ಣಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಉಪಾಧ್ಯಕ್ಷರಾದ ವೆಂಕಟೇಶ್, ಜಗದೀಶ್, ಮಂಜುನಾಥ್, ಪೂರ್ಣಚಂದ್ರ, ತಾಲೂಕು ಅಧ್ಯಕ್ಷರಾದ ವೆಂಕಟೇಶ್, ರೇವಣ್ಣ, ಲಿಂಗಸ್ವಾಮಿ, ಶ್ರೀನಿವಾಸ್‌ಮೂರ್ತಿ, ಚಂದ್ರಕಲಾ, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net