ಶಾಂತಿ ಸಾಗರದ ನೀರು ಪೂರೈಸುವಂತೆ ಒತ್ತಾಯಿಸಿ ಡಿಸಿಗೆ ಮನವಿ

CTD DC T venktesh---
Published on

ಚಿತ್ರದುರ್ಗ: ಶಾಂತಿಸಾಗರದ ಜಲಾಶಯದಿಂದ ಚಿತ್ರದುರ್ಗ ವಿದ್ಯಾನಗರ ಬಡಾವಣೆಗೂ ಕುಡಿವ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ವಿ ದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್,ಜಿಪಂ ಸಿಇಒ ಡಾ.ಎಸ್.ಆಕಾಶ್ ಹಾಗೂ ನಗರಸಭೆ ಆಯುಕ್ತೆ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.

ಈ ಜಲಾಶಯದಿಂದ 40 ಎಂಎಲ್ಡಿ ಸಾಮರ್ಥ್ಯದ ಯೋಜನೆ ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಲಾಗಿದೆ. ಪ್ರಾರಂಭದಲ್ಲಿ ವಿದ್ಯಾ ನಗರ ಬಡಾವಣೆಗೆ ಚಿತ್ರದುರ್ಗ ಎಪಿಎಂಸಿ ನೀರಿನ ಟ್ಯಾಂಕ್‌ನಿಂದ ನೀರು ಆಗುತ್ತಿತ್ತು. 2005 ಆಕ್ಟೋಬರ್ 28 ಹಾಗೂ 2006 ಆಗಸ್ಟ್ 19ರ ಆದೇಶಗಳನ್ವಯ ಹೊಳಲ್ಕೆರೆ ಪಟ್ಟಣ,ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣ ಹಾಗೂ ಈ ಪಟ್ಟಣಗಳ ಮಾರ್ಗದ ಗ್ರಾಮಗಳಿಗೆ ಯೋಜನೆ ವಿಸ್ತರಿಸಲಾಯಿತು. 2009ಮೇನಲ್ಲಿ ನಗರಸಭೆಗೆ ಯೋಜನೆ ನಿರ್ವಹಣೆ ವಹಿಸಲಾಗಿದೆ. ಆದರೆ ನಂತರದಲ್ಲಿ ವಿದ್ಯಾನಗರಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಜಗಳೂರಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಬಡಾವಣೆ ಮಧ್ಯದಲ್ಲಿ ಹಾದು ಹೋಗಿದ್ದರೂ ಬಡಾವಣೆ ನಿವಾಸಿಗಳು ನೀರಿನಿಂದ ವಂಚಿತರಾಗಿದ್ದಾರೆ. ಬಡಾವಣೆ ಕೊಳವೆಬಾವಿಗಳ ನೀರು ಅಧಿಕ ರಾಸಾಯಿನಿಕ ವಸ್ತುಗಳಿಂದ ಕೂಡಿ ದೆ. ಸಮೀಪದ ಮಲ್ಲಾಪುರ ಕೆರೆ ನೀರು ಕಲುಷಿತಗೊಂಡಿದ್ದು,ಇದರಿಂದಲೂ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ.

ಆದ್ದರಿಂದ ಶಾಂತಿಸಾಗರದ ಜಲಾಶಯದ ನೀರು ಸರಬರಾಜು ನಿರ್ವಹಣೆ ಸಮನ್ವಯ ಸಮಿತಿ ಅಧ್ಯಕ್ಷರಾದ ತಾವು ಕೂಡಲೇ ಬಡಾ ವಣೆಗೆ ನೀರು ಸರಬರಾಜು ಮಾಡಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ಸಿಇಒ ಹಾಗೂ ಆಯುಕ್ತರನ್ನು ಭೇಟಿಯಾಗಿ ಆಗ್ರಹಿಸಿದರು.ಸಂಘದ ಗೌರವಾಧ್ಯಕ್ಷ ಜೆ.ಪರಶುರಾಂ, ಅಧ್ಯಕ್ಷ ಜಿ.ಆರ್.ಪ್ರತಾಪ್‌ರೆಡ್ಡಿ, ಟಿ. ಮಂಜುನಾಥ್,ಜ್ಞಾನಮೂರ್ತಿ ಇದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net