ಡಿಸಿಗೆ ಮನವಿ, ಸಿಎಂ ಬಳಿಗೆ ನಿಯೋಗ

h10-jain samaja
Published on

ಹುಬ್ಬಳ್ಳಿ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಸ್ಥಿಪಂಜರ ಶೋಧಕ್ಕೆ ವಿರೋಧಿಸಿರುವ ಜೈನ ಸಮಾಜದ ಮುಖಂಡರು, ಧಾರವಾಡದಲ್ಲಿ ಆ. 11ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಅದೇ ದಿನ ಹಿರಿಯ ಮುಖಂಡರು, ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಕೆಲ ಬೇಡಿಕೆ ಈಡೇರಿಸಲು ಒತ್ತಾಯಿಸಲಿದ್ದಾರೆ.

ರಾಜ್ಯಾದ್ಯಂತ ಆಗಮಿಸಿದ್ದ ಜೈನ ಮುಖಂಡರು, ಜೈನಮುನಿ ಶ್ರೀ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಇಲ್ಲಿಯ ವರೂರಿನ ನವಗ್ರಹ ತೀರ್ಥದಲ್ಲಿ ಭಾನುವಾರ ಸಭೆ ನಡೆಸಿ, ಈ ತೀರ್ಮಾನಕ್ಕೆ ಬಂದರು.

ವಿಶೇಷ ತನಿಖಾ ತಂಡ(ಎಸ್‌ಐಟಿ) ಮಧ್ಯಂತರ ಅರ್ಜಿ ಪ್ರಕಟಿಸಬೇಕು. ಅನಾಮಧೇಯ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಈತ ಗುರುತಿಸಿದ್ದ ಪಾಯಿಂಟ್‌ಗಳು ಮುಗಿದಿವೆ. ಬಾಹುಬಲಿ ಅಹಿಂಸಾ ತತ್ವದ ಪ್ರತಿಪಾದಕರು. ಅವರ ಜಾಗದಲ್ಲಿಯೇ ಅಸ್ಥಿ ಹುಡುಕಲು ಹೊರಟಿಸುರುವುದು ಶೋಭೆ ತರುವಂಥದ್ದಲ್ಲ. ಮುಂದುವರಿಯಲು ಬಿಟ್ಟರೆ ಮಂಜುನಾಥ ಸ್ವಾಮಿ ಇರುವ ದೇವಸ್ಥಾನವನ್ನೂ ನೆಲಸಮಗೊಳಿಸುವ ಷಡ್ಯಂತ್ರವಿದೆ. ಆ ವ್ಯಕ್ತಿಯ ಬಗ್ಗೆ ನಮಗೆ ಅನುಮಾನವಿದೆ. ಗಿರೀಶ ಮಟ್ಟಣ್ಣವರ ಕೂಡಲೇ ಕ್ಷಮೆಯಾಚಿಸಬೇಕು, ಇಲ್ಲವೇ ಈತನನ್ನು ಪೊಲೀಸರು ಬಂಧಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡದ ಕಲಾಭವನದಿಂದ ಹೊರಟು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತೀರ್ಮಾನಿಸಿದರು.

ಒಂದು ವೇಳೆ ಮುಖ್ಯಮಂತ್ರಿ, ಗೃಹ ಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸಲು ವಿಫಲವಾದಲ್ಲಿ ಸೆ. 1ರಂದು ಧಾರವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕಿಳಿಯಲಾಗುವುದು ಎಂದು ಸಭೆ ಸೇರಿದ್ದವರು ಎಚ್ಚರಿಕೆ ನೀಡಿದರು.

ಪ್ರಮುಖರಾದ ವೀರಕುಮಾರ ಪಾಟೀಲ, ಧೂಳಗೊಂಡ ಪಾಟೀಲ, ಶೀತಲ್ ಪಾಟೀಲ, ಅಭಯ ಅವಲಕ್ಕಿ, ವಿಮಲ ತಾಳಿಕೋಟೆ, ಚಂದ್ರಪ್ಪ ಬೆಣ್ಣಿ, ದೇವೇಂದ್ರಪ್ಪ ಕಾಗೇನವರ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net