

ಹಾನಗಲ್ಲ: ಪಟ್ಟಣವು 10ನೇ ಬಾರಿಗೆ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲರೂ ಒಟ್ಟಾಗಿ ಭೇದ, ಭಾವ ಮರೆತು, ವೈಮನಸು ತೊರೆದು, ವೈಯಕ್ತಿಕ ಸಮಸ್ಯೆಗಳನ್ನು ಮರೆತು ಸಂಭ್ರಮ, ಸಡಗರದಿಂದ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಮಾ. 18 ರಿಂದ 26 ರವರೆಗೆ ನಡೆಯಲಿರುವ ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಾತ್ರಾ ಮಹೋತ್ಸವದ ಕಚೇರಿ ಉದ್ಘಾಟಿಸಿ, ಪೋಸ್ಟರ್ ಅನಾವರಣಗೊಳಿಸಿ ಅವರು ಮಾತನಾಡಿದರು. ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಸೇರಲಿದ್ದು ಯಾರಿಗೂ ತೊಂದರೆಯಾಗದಂತೆ ಕಾಳಜಿ ವಹಿಸಬೇಕು. ಜಾತ್ರಾ ಸಿದ್ಧತಾ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದರು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ ಮಾತನಾಡಿ, ಜಾತ್ರಾ ಮಹೋತ್ಸವದ ಯಶಸ್ಸಿಗಾಗಿ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸಮಿತಿಯ ಸದಸ್ಯರ ಜವಾಬ್ದಾರಿ ಹೆಚ್ಚಿದೆ. ಭಕ್ತರ ಸಹಕಾರದಿಂದ ಜಾತ್ರೆಯನ್ನು ಉತ್ತಮವಾಗಿ ನಡೆಸಬೇಕು ಎಂದರು.
ಸಮಿತಿಯ ಕೋಶಾಧ್ಯಕ್ಷ ರಾಜು ಗೌಳಿ ಮಾತನಾಡಿ, ದೊಡ್ಡ ಪ್ರಮಾಣದಲ್ಲಿ ಜಾತ್ರೆ ನಡೆಯಲಿರುವ ಕಾರಣ ಪ್ರಮುಖವಾಗಿ ಪುರಸಭೆ, ಪೊಲೀಸ್ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಸಹಜವಾಗಿ ಪ್ರತಿ ಮನೆ, ಮನೆಗಳಲ್ಲಿಯೂ ಸಹ ಹಬ್ಬದ ಸಡಗರ ಕಂಡು ಬರುತ್ತಿದೆ. 10 ನೇ ಬಾರಿ ನಡೆಯುತ್ತಿರುವ ಜಾತ್ರೆ ಇತಿಹಾಸದ ಪುಟ ಸೇರಬೇಕಿದೆ ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ, ತಹಸೀಲ್ದಾರ್ ರೇಣುಕಾ ಎಸ್., ಸಿಪಿಐ ಆಂಜನೇಯ, ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಮುಖ್ಯಾಧಿಕಾರಿ ಜಗದೀಶ ವೈ.ಕೆ., ಜಾತ್ರಾ ಸಮಿತಿ ಉಪಾಧ್ಯಕ್ಷ ಸುರೇಶ ಪೂಜಾರ, ಉದ್ಯಮಿಗಳಾದ ಎಸ್. ಅಮರೇಂದ್ರ, ಆರ್. ಪ್ರತಾಪ್, ಸಿದ್ದಲಿಂಗಪ್ಪ ಕಮಡೊಳ್ಳಿ, ಗಣೇಶ ಮೂಡ್ಲಿಯವರ, ಗುರುರಾಜ ನಿಂಗೋಜಿ, ಇತರರು ಉಪಸ್ಥಿತರಿದ್ದರು.