

ರಾಣೆಬೆನ್ನೂರ: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ (ಡಯಾಲಿಸಿಸ್) ರೋಗಿಗಳು ಶಿರಸ್ತೇದಾರ್ ಎಂ.ಎನ್. ಹಾದಿಮನಿ ಮೂಲಕ ಆರೋಗ್ಯ ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಹಿಂದೆ ಡಯಾಲಿಸಿಸ್ ಘಟಕ ಸ್ಥಾಪಿಸಿ ಬಿಆರ್ಎಸ್ ಸಂಸ್ಥೆಯವರಿಗೆ ಗುತ್ತಿಗೆ ನೀಡಲಾಗಿದೆ. ಸರ್ಕಾರವು ಗುತ್ತಿಗೆದಾರರಿಗೆ ಬಾಕಿ ಹಣ ನೀಡದ ಕಾರಣ ಮೇ 26ರಿಂದ ಘಟಕದ ಸೇವೆ ಸ್ಥಗಿತಗೊಳಿಸುವುದಾಗಿ ಹೇಳುತ್ತಿದ್ದಾರೆ. ಇದರಿಂದ ತಾಲೂಕಿನ 15ಕ್ಕೂ ಅಧಿಕ ರೋಗಿಗಳಿಗೆ ತೊಂದರೆಯಾಗಲಿದೆ. ರೋಗಿಗಳು ಜಿಲ್ಲಾಸ್ಪತ್ರೆಗೆ ಹೋಗಿ ಬರಲು ಆಗುವುದಿಲ್ಲ. ಲಾಕ್ಡೌನ್ ಸಮಯದಲ್ಲಿ ವಾಹನದ ವ್ಯವಸ್ಥೆಯೂ ಇಲ್ಲವಾಗಿದೆ. ಆದ್ದರಿಂದ ಸರ್ಕಾರವು ಸೂಕ್ತ ಕ್ರಮ ಕೈಗೊಂಡು ಗುತ್ತಿಗೆದಾರರ ಬಾಕಿ ಪಾವತಿಸಿ ಡಯಾಲಿಸಿಸ್ ಘಟಕ ಬಂದ್ ಮಾಡದಂತೆ ತಡೆಯಬೇಕು ಎಂದರು.
ರೋಗಿಗಳಾದ ಬಸವರಾಜ ಕಡೇಮನಿ, ವಾಸುದೇವ ಬೆಳ್ಳೂಡಿ, ಖಂಡೋಬಾ ಠಿಕಾರೆ, ನಾಗೇಶ ಬಡಿಗೇರ, ಸತ್ಯನಾರಾಯಣ ಬೈರಾವರ, ಮಹಾದೇವಪ್ಪ ಕರಬಣ್ಣನವರ, ರವಿ ಇಟ್ಟಿಗುಡಿ, ಶಿಲ್ಪಾ ದೊಡ್ಡಮನಿ, ಕುಮಾರ ಬಾಳಿಕಾಯಿ, ಭರಮಪ್ಪ ಶಂಬಣಕೇರಿ ಮತ್ತಿತರರು ಇದ್ದರು.
ಸರ್ಕಾರದಿಂದ ಮನವೊಲಿಕೆ: ಡಯಾಲಿಸಿಸ್ ಘಟಕದ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಅವರಿಗೆ ಸಂಬಳ ನೀಡಿಲ್ಲ ಎಂಬ ಉದ್ದೇಶದಿಂದ ಮೇ 26ರಿಂದ ಸೇವೆ ಸ್ಥಗಿತಗೊಳಿಸುವ ಕುರಿತು ತಿಳಿಸಿದ್ದರು. ಆದರೆ, ಸರ್ಕಾರ ಗುತ್ತಿಗೆದಾರರ ಮನವೊಲಿಸಿ ಸೇವೆ ಮುಂದುವರಿಸುವಂತೆ ತಿಳಿಸಿದೆ. ಆದ್ದರಿಂದ ಡಯಾಲಿಸಿಸ್ ಸೇವೆ ಎಂದಿನಂತೆ ಮುಂದುವರಿಯಲಿದೆ. ಆದರೆ, ಡಯಾಲಿಸಿಸ್ಗೆ ಬೇಕಾಗುವ ಔಷಧವನ್ನು ತಾಲೂಕು ಆಸ್ಪತ್ರೆಯಿಂದ ನೀಡಲು ಸರ್ಕಾರ ಸೂಚಿಸಿದೆ. ಆದ್ದರಿಂದ ಡಯಾಲಿಸಿಸ್ ಘಟಕದ ಸಿಬ್ಬಂದಿಗೆ ಬೇಕಾದ ಔಷಧವನ್ನು ತರಿಸುವ ಪ್ರಯತ್ನ ನಡೆದಿದೆ. ಮೇ 26ರಂದು ಔಷಧ ಬಂದರೆ ಕೂಡಲೆ ರೋಗಿಗಳಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆಯಿಸಿಕೊಂಡು ಡಯಾಲಿಸಿಸ್ ಮಾಡಿಸಲಾಗುವುದು. ಔಷಧ ಬರುವುದು ಒಂದು ದಿನ ತಡವಾದರೆ ಮರುದಿನದಿಂದ ಸೇವೆ ಆರಂಭಿಸಲಾಗುವುದು ಎಂದು ನಗರದ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪರಮೇಶ್ವರಪ್ಪ ‘ವಿಜಯವಾಣಿ’ಗೆ ತಿಳಿಸಿದರು.