

ಯಲ್ಲಾಪುರ: ಸಿದ್ದಿ ಸಮುದಾಯಕ್ಕೆ ಸಮರ್ಪಕ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ರಾಜ್ಯ ಸಿದ್ದಿ ಜನಸೇವಾ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸರ್ಕಾರ ಸೇರಿಸಿದರೂ ಮೂಲಭೂತವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತವಾಗಿದೆ. ಸಮುದಾಯದವರಿಗೆ ಮನೆ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 50 ಕೋಟಿ ರೂ. ಮಂಜೂರು ಮಾಡುವಂತೆ ಟ್ರಸ್ಟ್ನ ಪ್ರಮುಖರು ಆಗ್ರಹಿಸಿದರು.
ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆಯ ನಿರ್ದೇಶಕ ಯೊಗೇಶ ಪ್ರತಿಕ್ರಿಯಿಸಿ, ಸರ್ಕಾರ ಸಿದ್ದಿ ಸಮುದಾಯದ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ನ್ಯಾಯವಾದಿ ಜಯರಾಮ ಸಿದ್ದಿ ಹಾಗೂ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ಸಿದ್ದಿ ಮಾತನಾಡಿ, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಿದ್ದಿ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆ 500 ಕಿಮೀ ದೂರದಿಂದ ಬಂದು ಮನವಿ ನೀಡುವ ಅವಶ್ಯಕತೆ ಇರಲಿಲ್ಲ. ಸಮುದಾಯಕ್ಕೆ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಈಗಾಗಲೇ ಬಜೆಟ್ನಲ್ಲಿ 200 ಕೊಟಿ ರೂ. ಗಳನ್ನು ಪರಿಶಿಷ್ಟ ಪಂಗಡದವರಿಗೆ ಮೀಸಲಿಡಲಾಗಿದೆ. ಸಿದ್ದಿ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡುತ್ತೇನೆಂದು ಭರವಸೆ ನೀಡಿದರು.
ಜಿಲ್ಲೆಯ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಸಮಿತಿಯ ಸದಸ್ಯ ಸುರೇಶ ಸಿದ್ದಿ ನಂದೊಳ್ಳಿ, ಅಲೆಮಾರಿ ಸಮಿತಿಯ ಸದಸ್ಯ ಗಣಪತಿ ಸಿದ್ದಿ ಕೊಡಸೆ, ಸಮುದಾಯದ ಪ್ರಮುಖರಾದ ಸುರೇಶ ಕೈತಾತ್ ಸಿದ್ದಿ, ಫ್ರಾನ್ಸಿಸ್ ಸಿದ್ದಿ, ಶಂಕರ ಸಿದ್ದಿ ಹಾಸಣಗಿ, ಸಂತೋಷ ಸಿದ್ದಿ, ಚಂದ್ರಾ ಸಿದ್ದಿ ಹರಿಗದ್ದೆ, ನಾರಾಯಣ ಸಿದ್ದಿ ಕೋಟೆಮನೆ, ಮಂಜುನಾಥ ಸಿದ್ದಿ ಅಣಲಗಾರ, ಗಣೇಶ ಸಿದ್ದಿ ಮಾಗೊಡ, ಪ್ರಕಾಶ ಸಿದ್ದಿ, ಅಲ್ವಿನ್ ಸಿದ್ದಿ ಇತರರಿದ್ದರು.