ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಸಿಎಂಗೆ ಮನವಿ

CAN_5881
Published on

ಮೈಸೂರು: ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಈ ಬಾರಿಯ ಬಜೆಟ್‌ನಲ್ಲಿ 300 ಕೋಟಿ ರೂ. ನೀಡಬೇ ಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದರು.

ನಗರದ ಕೆ.ಆರ್.ವನಂನಲ್ಲಿ ಬುಧವಾರ ಹೊಯ್ಸಳ ಕರ್ನಾಟಕ ಸಂಘದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ನಿಗಮದ ಕಾರ್ಯಚಟುವಟಿಕೆಗೆ ರಾಜ್ಯ ಸರ್ಕಾರ ಈಗಾಗಲೇ 25 ಕೋಟಿ ರೂ. ನೀಡಿದ್ದು, ಮುಂದೆ ಮತ್ತಷ್ಟು ಅನುದಾನ ನೀಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಬ್ರಾಹ್ಮಣ ಸಮುದಾಯದವರಲ್ಲಿ ಮೊದಲಿನಿಂದಲೂ ಒಗ್ಗಟ್ಟು ಇಲ್ಲ. ರಾಜ್ಯದ 21 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣರು ಯಾವುದೇ ಅಭ್ಯರ್ಥಿಯ ಸೋಲು, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವಷ್ಟು ಸಂಖ್ಯಾಬಲ ಹೊಂದಿದ್ದಾರೆ. ಆದರೆ, ವಿಧಾನಸಭೆಯಲ್ಲಿ ಬ್ರಾಹ್ಮಣರ ಪ್ರಾತಿನಿಧ್ಯ ಕಡಿಮೆ ಇದೆ. ಇನ್ನಾದರೂ ನಾವು ಒಗ್ಗಟ್ಟಿನಿಂದ ಇದ್ದು, ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.

ಮೇಲ್ವರ್ಗದವರಿಗೆ ಪ್ರಧಾನಿ ನರೇಂದ್ರ ಮೋದಿ ಶೇ.10 ರಷ್ಟು ಮೀಸಲಾತಿ ಘೋಷಿಸಿದ್ದಾರೆ. ಇದರ ಪೂರ್ಣ ಪ್ರಮಾಣದ ಲಾಭವನ್ನು ಪಡೆದುಕೊಳ್ಳಲು ಸಮುದಾಯದವರು ಶ್ರಮಿಸಬೇಕು. ಆದರೆ, ಸಾಕಷ್ಟು ಬ್ರಾಹ್ಮಣ ಸಮುದಾಯದವರು ಜನಗಣತಿ ಸಂದರ್ಭ ಉಪ ಜಾತಿಯ ಹೆಸರು ನೀಡುತ್ತಿದ್ದಾರೆ. ಹೀಗಾಗಿ ರಾಜ್ಯದ ಸರ್ಕಾರದ ಬಳಿ ಇರುವ ಅಂಕಿ ಅಂಶದಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆ ಇದೆ. ಜನಸಂಖ್ಯೆ ಕಡಿಮೆ ಆದಷ್ಟು ನಮಗೆ ದೊರೆಯುವ ಮೀಸಲಾತಿ ಪ್ರಮಾಣ ಕೂಡ ಕಡಿಮೆ ಆಗಲಿದೆ. ಇನ್ನು ಮುಂದೆ ಜನಗಣತಿ ಸಂದರ್ಭ ಬ್ರಾಹ್ಮಣ ಸಮುದಾಯದವರು ಕಡ್ಡಾಯವಾಗಿ ‘ಬ್ರಾಹ್ಮಣ’ ಎಂದು ಬರೆಸಲು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಸಮುದಾಯದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲು ಉದ್ದೇಶಿಸ ಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಕೈಗೊಂಡು ಸಮುದಾಯದವರನ್ನು ಭೇಟಿಯಾಗಿ ಸಮಾಲೋಚನೆ ನಡೆಸುತ್ತಿದ್ದೇನೆ. ಸಮುದಾಯದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಉದ್ದೇಶಿಸಲಾಗಿದೆ. ಅಡುಗೆ ಭಟ್ಟರು ಹಾಗೂ ಪುರೋಹಿತರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಡುಗೆ ಭಟ್ಟರು ಹಾಗೂ ಪುರೋಹಿತರನ್ನು ವಿವಾಹವಾಗುವ ವಧುವಿಗೆ 3 ಲಕ್ಷ ರೂ. ಬಾಂಡ್ ನೀಡುವ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್ ಮಾತನಾಡಿ, ಹೊಯ್ಸಳ ಕರ್ನಾಟಕ ಸಂಘವು ಹೊಸದಾಗಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಈ ನಿಲಯ ನಿರ್ಮಾಣಕ್ಕೆ ಸಮುದಾಯದ ಪ್ರತಿಯೊಬ್ಬರೂ ಕೈಜೋಡಿಸುವ ಅವಶ್ಯಕತೆ ಇದೆ ಎಂದರು.

ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀದತ್ತ ವಿಜಯಾನಂದತೀರ್ಥ ಸ್ವಾಮೀಜಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ವೇದಿಕೆಯಲ್ಲಿ ನಗರ ಪಾಲಿಕೆ ಸದಸ್ಯರಾದ ಮ.ವಿ.ರಾಮಪ್ರಸಾದ್, ರಮೇಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ, ಕಾರ್ಯದರ್ಶಿ ವಿ.ಹರೀಶ್, ಮಾಜಿ ಅಧ್ಯಕ್ಷ ಪಿ.ವಿ.ಭಾರದ್ವಾಜ್, ಹೊಯ್ಸಳ ಕರ್ನಾಟಕ ಟ್ರಸ್ಟ್‌ನ ಅಧ್ಯಕ್ಷ ಕೆ.ಆರ್. ಶಿವಶಂಕರ್, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಮುಡಾ ಇಂಜಿನಿಯರ್ ಭಾಸ್ಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net