

ಶಿವಮೊಗ್ಗ: ಈ ಬಾರಿ ಶಿವಮೊಗ್ಗ ದಸರಾಕ್ಕೆ ಎರಡು ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗಿದೆ. ಅವರು ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಿಎಂ ಭೇಟಿಯಾಗಿದ್ದ ಸಂದರ್ಭ ದಸರಾಕ್ಕೆ ಅಗತ್ಯವಿರುವ ಅನುದಾನವನ್ನು ಪ್ರತಿ ವರ್ಷ ರಾಜ್ಯ ಸರ್ಕಾರ ನೀಡುತ್ತಿರುವ ಬಗ್ಗೆ ನೆನಪಿಸಲಾಯಿತು. ಎರಡು ಕೋಟಿ ರೂ.ಗೆ ಮನವಿ ಮಾಡಲಾಗಿದೆ. ಕಡೇ ಪಕ್ಷ 1.50 ಕೋಟಿ ರೂ. ಸಿಗುವ ವಿಶ್ವಾಸವಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ನೀಡುವ ಅನುದಾನದ ಜತೆಗೆ ಪಾಲಿಕೆಯಲ್ಲಿ ದಸರಾಕ್ಕೆಂದು ಮೀಸಲಿಟ್ಟಿರುವ ಅನುದಾನವನ್ನೂ ಬಳಕೆ ಮಾಡಲಾಗುವುದು. ಎಂದಿನಂತೆಯೇ ಈ ವರ್ಷವೂ ದಸರಾ ವಿಜೃಂಭಣೆಗೆ ಕುಂದುಂಟಾಗದಂತೆ ಎಚ್ಚರವಹಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆಯಲ್ಲಿ ಈಗ ಜನಪ್ರತಿನಿಧಿಗಳಿಲ್ಲ. ಅಧಿಕಾರಿ ವರ್ಗದ ಮೇಲೆ ದಸರಾ ಆಚರಣೆಯ ಜವಾಬ್ದಾರಿಯಿದೆ. ಪಾಲಿಕೆ ಆಯುಕ್ತ ಡಾ. ಕವಿತಾ ಯೋಗಪ್ಪನವರ್ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ನಮ್ಮ ಸಲಹೆಗಳನ್ನೂ ಆಲಿಸಿದ್ದಾರೆ. ಒಟ್ಟು 14 ಸಮಿತಿಗಳನ್ನು ಈಗಾಗಲೇ ರಚನೆ ಮಾಡಲಾಗಿದೆ. ಈ ಸಮಿತಿಗಳು ದಸರಾ ಸಿದ್ಧತೆ ಹಾಗೂ ಮೇಲುಸ್ತುವಾರಿ ನೋಡಿಕೊಳ್ಳಲಿವೆ ಎಂದು ಹೇಳಿದರು.
ವಿಶೇಷ ದಸರಾ-ಗಂಡಾನೆ ಮಾತ್ರ: ಈ ಬಾರಿ ದಸರಾದಲ್ಲಿ ವಿಶೇಷವಾಗಿ ಗಮಕ, ಪೌರ ಕಾರ್ಮಿಕರ ಹಾಗೂ ಪತ್ರಿಕಾ ದಸರಾಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಗಮಕ ನಮ್ಮ ಜಿಲ್ಲೆಯ ವಿಶೇಷ ಕಲೆ. ಹೀಗಾಗಿ ಗಮಕ ದಸರಾ ಸೇರ್ಪಡೆ ಮಾಡಲಾಗುತ್ತಿದೆ. ನಗರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರಿಗಾಗಿ ಪ್ರತ್ಯೇಕ ದಸರಾ ಆಯೋಜಿಸಲಾಗುವುದು, ಪತ್ರಕರ್ತರಿಗಾಗಿ ಪತ್ರಿಕಾ ದಸರಾ ಆಯೋಜನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಚನ್ನಬಸಪ್ಪ ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ಮೆರವಣಿಗೆ ವೇಳೆ ಜಂಬೂ ಸವಾರಿ ಇರಲಿದೆ. ಇದಕ್ಕಾಗಿ ಮೂರು ಆನೆಗಳನ್ನು ಒದಗಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಸಕ್ರೆಬೈಲು ಆನೆ ಬಿಡಾರದಲ್ಲಿರುವ ಹೆಣ್ಣಾನೆಗಳಲ್ಲಿ ಕೆಲವು ಗರ್ಭ ಧರಿಸಿದ್ದರೆ, ಇನ್ನು ಕೆಲವಕ್ಕೆ ಸಣ್ಣ ಮರಿಗಳಿವೆ. ಹೀಗಾಗಿ ಹೆಣ್ಣಾನೆ ಒದಗಿಸಲು ಸಾಧ್ಯವಿಲ್ಲ. ಮೂರು ಗಂಡಾನೆಗಳನ್ನು ದಸರಾಕ್ಕೆ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ತಿಳಿಸಿದರು.