

ಮುಂಡರಗಿ: ಪಟ್ಟಣದ 17ನೇ ವಾರ್ಡ್ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ನಗರಕ್ಕೆ ಮೂಲಸೌಲಭ್ಯ ಒದಗಿಸಲು ಆಗ್ರಹಿಸಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯಿಂದ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಬಡಾವಣೆಯಲ್ಲಿ ಮೂಲಸೌಕರ್ಯಗಳಾದ ಉದ್ಯಾನ, ಆಟದ ಮೈದಾನ, ನಾಗರಿಕ ಸೌಲಭ್ಯಗಳ ಜಾಗವಿಲ್ಲ. ರಸ್ತೆ, ಚರಂಡಿ ವ್ಯವಸ್ಥೆಗಳಿಲ್ಲ. ಆದರೂ, ಪುರಸಭೆ ಮನೆ ಕಟ್ಟಲು ಪರವಾನಗಿ ನೀಡಿದೆ. ಕೆಲವೆಡೆ ಮಲೀನ ನೀರು ಸಂಗ್ರಹವಾಗುತ್ತಿರುವುದರಿಂದ ಮಲೇರಿಯಾ, ಡೆಂಘೆ, ಚಿಕೂನ್ಗುನ್ಯಾ ರೋಗ ಹರಡುವ ಭೀತಿ ಇದೆ. 23 ವಾರ್ಡ್ ಸ್ವಚ್ಛವಾಗಿಡುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ. ಸಮಸ್ಯೆ ಶೀಘ್ರವಾಗಿ ಸರಿಪಡಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಹಲವು ಲೇಔಟ್ಗಳಲ್ಲಿ ಪಾದಚಾರಿ ರಸ್ತೆ ಹಾಗೂ ರಾಜ ಕಾಲುವೆ ನಿರ್ವಿುಸಿಲ್ಲ. ಆದರೂ, ಲೇಔಟ್ಗಳಲ್ಲಿನ ನಿವೇಶನ ಮಾರಾಟ ಮಾಡಲು ಪುರಸಭೆ ಅನುಕೂಲ ಮಾಡಿಕೊಟ್ಟಿದೆ. ಕಾನೂನು ಉಲ್ಲಂಘನೆ ಮಾಡಿ, ಬಡಾವಣೆ ನಿರ್ವಿುಸಲಾಗಿದೆ ಎಂದು ದೂರಿದರು.
ಕಿಸಾನ್ ವಿಕಾಸ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಧ್ರುವಕುಮಾರ ಹೂಗಾರ, ರಿಯಾಜ ಹೊಸಪೇಟಿ, ಶಿವಪ್ಪ ಬಾರಕೇರ ಇತರರು ಇದ್ದರು.