

ಮುಂಡರಗಿ: ಸಂಚರಿಸಲು ಸರಿಯಾದ ರಸ್ತೆಗಳಿಲ್ಲ. ಯಾವ ಕಡೆಯಿಂದ ಬಂದರೂ ಮುಖ್ಯರಸ್ತೆಗೆ ಕೂಡುವ ಅನುಕೂಲತೆಗಳಿಲ್ಲ. ಅತಿಕ್ರಮಣವಾಗಿರುವ ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ವಿುಸಬೇಕು ಎಂದು ಒತ್ತಾಯಿಸಿ ಪಟ್ಟಣದ 20ನೇ ವಾರ್ಡ್ ನಿವಾಸಿಗಳು ಸೋಮವಾರ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಹಲವು ಬಾರಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಸ್ತೆಯ ಅಗಲೀಕರಣ ಮತ್ತು ಮುಖ್ಯ ರಸ್ತೆಗೆ ಸೇರಿಸುವಂತೆ ಒತ್ತಾಯಿಸಿದ್ದರೂ ಸ್ಪಂದಿಸಿಲ್ಲ. ವಾರ್ಡಿನಲ್ಲಿ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಆಂಬುಲೆನ್ಸ್, ಆಟೋ, ದ್ವಿಚಕ್ರ ವಾಹನ ಬರಲು ಯಾವುದೇ ದಿಕ್ಕಿನಿಂದ ರಸ್ತೆ ಇಲ್ಲದಂತಾಗಿದೆ. ಇದರಿಂದ ಈ ವಾರ್ಡ್ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮಾ. 3 ರಂದು ಮನವಿಗೆ ಸ್ಪಂದಿಸಿದ ಪುರಸಭೆಯ ಮುಖ್ಯಾಧಿಕಾರಿಗಳು ವಾರ್ಡ್ಗೆ ಭೇಟಿ ನೀಡಿ ರಸ್ತೆ ಅಳತೆ ಮಾಡಿ ಪರಿಶೀಲಿಸಿದಾಗ ಅಕ್ರಮವಾಗಿ ಕಟ್ಟಡ ನಿರ್ವಿುಸಿರುವುದು ಕಂಡುಬಂದಿದೆ. ಆದರೆ, ಮುಖ್ಯಾಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಆದೇಶ ಬೇಕು ಎಂದು ದಿನಗಳನ್ನು ದೂಡುತ್ತಿದ್ದಾರೆ. ಆದ್ದರಿಂದ ಈ ಬಾರಿಯಾದರೂ ಸಲ್ಲಿಸಿರುವ ಮನವಿಗೆ ಸ್ಪಂದಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.
ಮಾಬುಸಾಬ್ ದೊಡ್ಡಮನಿ, ಮಾಬುಸಾಬ್ ಮುಲ್ಲಾ, ಬಸವರಾಜ ಅಸುಂಡಿ, ಮೆಹಬೂಬ್ ನಾಗನೂರ, ತಾಜುದ್ದೀನ್ ಡಂಬಳ, ಅಬ್ದುಲ್ವುಜೀದ್ ಹಣಗಿ, ಇಬ್ರಾಹಿಮಸಾಬ್ ಮೋಮಿನ್, ಇಮಾಮಸಾಬ್ ಡಂಬಳ, ರಾಜಾಭಕ್ಷಿ ಒಂಟಿ, ರಮಿಜಾ ಡಂಬಳ, ಖಾತುನಬಿ ಹಣಗಿ, ಶಮೀನಬಾನು ವಡ್ಡಟ್ಟಿ, ಇತರರಿದ್ದರು.