

ಗಜೇಂದ್ರಗಡ: ಮೂರ್ಛೆರೋಗ (ಫಿಟ್ಸ್ ) ಹಾಗೂ ನರರೋಗದಿಂದ 5 ವರ್ಷದ ಬಾಲಕನೊಬ್ಬ ಬಳಲುತ್ತಿದ್ದು, ಆತನಿಗೆ ಚಿಕಿತ್ಸೆ ಕೊಡಿಸಲು ಪಾಲಕರು ಪರದಾಡುತ್ತಿದ್ದಾರೆ.ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಅಕ್ಕಮಹಾದೇವಿ- ಯಲ್ಲಪ್ಪ ಹೊಸಳ್ಳಿ ದಂಪತಿಯ 3ನೇ ಪುತ್ರ ಬಸವರಾಜ ನರರೋಗದಿಂದ ಬಳಲುತ್ತಿದ್ದಾನೆ. ಈತನಿಗೆ ಕೈಕಾಲುಗಳಲ್ಲಿ ಸ್ವಾಧೀನ ಇಲ್ಲ, ಮಾತೂ ಆಡುವುದಿಲ್ಲ. ಅಲ್ಲದೆ, ಆಗಾಗ ಫಿಟ್ಸ್ ಬರುತ್ತದೆ. ಹಾಲು ಸೇವನೆಯಷ್ಟೇ ಈತನಿಗೆ ನಿತ್ಯ ಆಹಾರ. ಮೂರು ಮಕ್ಕಳನ್ನು ಹೊಂದಿರುವ ದಂಪತಿ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂತಹದರಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಗನಿಗೆ ಚಿಕಿತ್ಸೆ ಹಾಗೂ ಔಷಧ ಖರ್ಚು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಯಲ್ಲಪ್ಪ 1 ಎಕರೆ ಭೂಮಿ ಅಡವಿಟ್ಟಿದ್ದಾರೆ, ಪತ್ನಿ ಅಕ್ಕಮಹಾದೇವಿ ತನ್ನಲ್ಲಿದ್ದ ಬಂಗಾರ ಮಾರಿ ಮಗನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಮಗನನ್ನು ಕಟ್ಟಿಕೊಂಡು ಆಸ್ಪತ್ರೆಗೆ ಹೋದರೆ ಅಂದಿನ ಕೂಲಿ ಇಲ್ಲ. ಇನ್ನೊಂದೆಡೆ ಮಗನ ಆರೋಗ್ಯ ಸುಧಾರಣೆಯಾಗದಿರುವುದು ದಂಪತಿಯನ್ನು ಕಂಗೆಡಿಸಿದೆ.
ಆಧಾರ್ ಕಾರ್ಡ್ಗಾಗಿ ಅಲೆದಾಟ: ಮಗನಿಗೆ ಅಂಗವಿಕಲ ಮಾಸಾಶನ ಪಡೆಯಲು ಆಧಾರ್ ಕಾರ್ಡ್ ಮಾಡಿಸಲು ಹೋದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಿಕೊಳ್ಳಿ ಎಂದು ಸೂಡಿ ಆಧಾರ್ ಕೇಂದ್ರದವರು ಹೇಳುತ್ತಾರೆ. ಇತ್ತ ಡಿಸಿ ಕಚೇರಿಗೆ ಹೋದರೆ ಆಧಾರ್ ಅದಾಲತ್ ಇದೆ ಅಂತ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತೇವೆ. ಆಗ ಬಂದು ಮಾಡಿಸಿಕೊಳ್ಳಿ ಎಂದು ಹೇಳುತ್ತಾರೆ. ಮಾಸಾಶನ ಬಂದರೆ ಔಷಧದ ಖರ್ಚಿಗೆ ನೆರವಾಗುತ್ತೆ ಎಂದು 2 ವರ್ಷದಿಂದ ಅಲೆದಾಡುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಯಲ್ಲಪ್ಪ ಹೊಸಳ್ಳಿ ಅಳಲು ತೊಡಿಕೊಳ್ಳುತ್ತಾರೆ.
ನೆರವು ಸಲ್ಲಿಸುವವರು: ಅಕ್ಕಮಹಾದೇವಿ ಯಲ್ಲಪ್ಪ ಹೊಸಳ್ಳಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಸೂಡಿ. ಖಾತೆ ಸಂಖ್ಯೆ: 89045050232. ಐಎಫ್ಎಸ್ಸಿ ಕೋಡ್ ನಂ- ಕೆವಿಜಿಬಿ 0006310. ಯಲ್ಲಪ್ಪ ಹೊಸಳ್ಳಿ ಮೊ. 93532 40896.
EndFragment