

ಕೊಳ್ಳೇಗಾಲ: ಸತತ 4 ತಿಂಗಳಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿರುವ ನಗರಸಭಾ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಾಣಿಕ್ಯರಾಜು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತ ಎ.ರಮೇಶ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ನಗರಸಭಾ ಕಚೇರಿಯಲ್ಲಿ ಹಕ್ಕು ವರ್ಗಾವಣೆ ಹಾಗೂ ನ್ಯಾಯಾಲಯದ ವ್ಯಾಜ್ಯಗಳ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಣಿಕ್ಯರಾಜು ಕೆಲಸಕ್ಕೆ ಆಗಿಂದಾಗ್ಗೆ ಅನಧಿಕೃತವಾಗಿ ಗೈರಾಗುತ್ತಿದ್ದಾರೆ. ಕಳೆದ 2 ವರ್ಷವೂ ಇದೇ ಪ್ರಕ್ರಿಯಲ್ಲಿ ತೊಡಗಿದ್ದ ಬಗ್ಗೆ ನಗರಸಭಾ ಪೌರಾಯುಕ್ತರು ಹಲವು ನೋಟಿಸ್ ಮೇಲೆ ನೋಟಿಸ್ ನೀಡಿದ ಉದಾಹರಣೆಗಳಿವೆ.
ಪೌರಾಯುಕ್ತರಲ್ಲಿ ಮಾಣಿಕ್ಯರಾಜು ಪೂರ್ವಾನುಮತಿ ಪಡೆಯದೆ ಹಾಗೂ ಕಚೇರಿಗೆ ಯಾವುದೇ ಮಾಹಿತಿ ನೀಡದೆ ಕಳೆದ ಆ.9 ರಿಂದ ಇಂದಿನವರೆಗೂ ಅನಧಿಕೃತವಾಗಿ ಗೈರಾಗಿದ್ದಾರೆ. ಈ ನಡೆಯನ್ನು ಪ್ರಶ್ನಿಸಿ ಪೌರಾಯುಕ್ತರು ಮಾಣಿಕ್ಯರಾಜು ಅವರಿಗೆ ನೀಡಿದ ನೋಟಿಸ್‌ಗಳಿಗೂ ಯಾವುದೇ ಲಿಖಿತ ಉತ್ತರ ಬಂದಿಲ್ಲ.
ಇದರಿಂದ ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗಿ ನಿಗದಿತ ಅವಧಿಯೊಳಗೆ ಸಕಾಲದಲ್ಲಿ ಸೇವೆ ನೀಡಲು ಆಗದೆ ಹಾಗೂ ನ್ಯಾಯಾಲಯದ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಕಡತ ಹಾಗೂ ಮಾಹಿತಿಯನ್ನು ನಗರಸಭೆಯ ವಕೀಲರಿಗೆ ನೀಡದೆ ನ್ಯಾಯಾಲಯದಿಂದ ನಗರಸಭೆಗೆ ನೋಟಿಸ್‌ಗಳು ಬರುತ್ತಿದ್ದು, ನಗರಸಭಾ ಆಡಳಿತಕ್ಕೆ ಕಟ್ಟ ಹೆಸರು ಬರುತ್ತಿದೆ ಮತ್ತು ತಮ್ಮನ್ನು ಕರ್ತವ್ಯದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೌರಾಯುಕ್ತರು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಈ ನಡುವೆ ಪೌರಾಯುಕ್ತರು ಮುಂದುವರಿದು ಜಿಲ್ಲಾಧಿಕಾರಿಗೆ ಇನ್ನೂ ಕೆಲವು ಸಂಗತಿಗಳನ್ನು ಪತ್ರದಲ್ಲಿ ತಿಳಿಸಿದ್ದಾರೆ. ಮಾಣಿಕ್ಯರಾಜು ಅವರು ಕಚೇರಿ ಕೆಲಸಕ್ಕೆ ಅನಧಿಕೃತ ಗೈರಾಗುವುದಲ್ಲದೆ, ಹಕ್ಕು ವರ್ಗಾವಣೆಗೆ ಸಂಬಂಧಿಸಿದ ಕಡತ ಮತ್ತು ನ್ಯಾಯಾಲಯಕ್ಕೆ ಬೇಕಾದ ಪ್ರಕರಣಗಳ ದಾಖಲೆಯಿರುವ ಅಲ್ಮೇರಾ ಕೀಲಿಯನ್ನು ಕಚೇರಿಗೆ ಒಪ್ಪಿಸಿಲ್ಲ. ಇದರಿಂದಲೂ ಸಾರ್ವಜನಿಕರ ಕೆಲಸಕ್ಕೆ ತೊಡಕಾಗಿತ್ತು. ಆದ್ದರಿಂದ ಮಾಣಿಕ್ಯರಾಜು ಅನುಪಸ್ಥಿತಿಯಲ್ಲಿ ಅಲ್ಮೇರಾ ಕೀ ತೆಗೆಸಿ, ಕಚೇರಿಯಲ್ಲಿರುವ ಮತ್ತೊಬ್ಬ ನೌಕರರಿಗೆ ಪ್ರಭಾರ ಜವಾಬ್ದಾರಿ ವಹಿಸಲಾಗಿದೆ. ಅಲ್ಮೇರಾದಲ್ಲಿರುವ ಕಡತ ಪರಿಶೀಲಿಸಲಾಗಿ ಮಾಣಿಕ್ಯರಾಜು ಅವರು 2022 ಆಗಸ್ಟ್, ಸೆಪ್ಟೆಂಬರ್‌ನಲ್ಲಿ ತಮ್ಮಿಂದ ಹಕ್ಕು ವರ್ಗವಣೆಗೆ ಆದೇಶಿಸಿರುವ ಕಡತವನ್ನು ವಿಲೇವಾರಿ ಮಾಡದೆ ಬಾಕಿ ಇಟ್ಟುಕೊಂಡಿರುವುದು ತಿಳಿದಿದೆ. ಈ ಕಾರಣಕ್ಕೆ ಸಂಬಂಧಿಸಿದ ಜನರು ನಗರಸಭಾ ಆಡಳಿತದ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ನೀಡುತ್ತಿದ್ದಾರೆ ಎಂದು ತಿಳಿಸಿದ್ದು, ಅನಿವಾರ್ಯವಾಗಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.