

ಮಂಡ್ಯ: ವಿಶ್ವವಿಖ್ಯಾತ ಕೆಆರ್‌ಎಸ್ ಅಣೆಕಟ್ಟೆಯ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸಿ ವರದಿ ನೀಡುವಂತೆ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಎಂಎಲ್‌ಸಿ ದಿನೇಶ್ ಗೂಳಿಗೌಡ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಡಿಕೆಶಿ, ತಕ್ಷಣ ತಜ್ಞರ ತಂಡ ಕಳಿಸಿ, ಅಧ್ಯಯನ ನಡೆಸಿ, ಸೂಕ್ತ ಕ್ರಮ ವಹಿಸುವಂತೆ ನೀರಾವರಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಕೆಆರ್‌ಎಸ್ ಜಲಾಶಯದಲ್ಲಿ ಹೂಳು ತುಂಬಿದೆಯೇ?. ಮಾಡರ್ನ್ ಸ್ಟ್ಯಾಂಡರ್ಡ್‌ಗೆ ಅಣೆಕಟ್ಟು ಹೊಂದಿಕೆಯಾಗುವಂತಿದೆಯೇ? ಎಂಬುದನ್ನು ತಿಳಿಯಲು ತುರ್ತಾಗಿ ಅಲ್ಲಿಗೆ ತಜ್ಞರ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಬೇಕು. ಬಳಿಕ ಸೂಕ್ರ ಕ್ರಮ ಕೈಗೊಳ್ಳಬೇಕು. ಡ್ಯಾಂನ ಗರಿಷ್ಠ ಸಾಮರ್ಥ್ಯದ 49.50 ಟಿಎಂಸಿ ನೀರು ಈಗಲೂ ಸಂಗ್ರಹವಾಗುತ್ತಿದೆಯೇ?. ಸೀಪೇಜ್ ನಿರ್ವಹಣೆ, ಗೇಟ್ ಸುಸ್ಥಿತಿ ಸೇರಿ ಇನ್ನಿತರ ಅಂಶಗಳನ್ನು ಪರಿಶೀಲಿಸಬೇಕು ಎಂಬುದಾಗಿ ಇಬ್ಬರು ಶಾಸಕರು ಪ್ರಸ್ತಾಪಿಸಿದ್ದಾರೆ. ಅದರಂತೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಶಾಸಕರ ಮನವಿಯಲ್ಲೇನಿದೆ?: ಕಾವೇರಿ ಕನ್ನಡ ನಾಡಿನ ಜೀವನದಿಯಾಗಿದೆ. ಇಲ್ಲಿ ಕಟ್ಟಲಾದ ಅಣೆಕಟ್ಟೆಯು ಈ ಭಾಗದ ರೈತರಿಗೆ ಜೀವನ ನೀಡಿದೆ. ಕ್ರಿ.ಶ.1911ರಲ್ಲಿ ಬ್ರಿಟಿಷರ ಕಾಲದಲ್ಲಿ ಅಣೆಕಟ್ಟೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಕ್ರಿ.ಶ 1932ರಲ್ಲಿ ಮೈಸೂರಿನ ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪೂರ್ಣಗೊಂಡಿತು. ಶತಮಾನಕ್ಕೆ ಹತ್ತಿರವಾಗುತ್ತಿರುವ ದೇಶದ ಅತ್ಯಂತ ಪ್ರಮುಖ ಹಾಗೂ ಹಳೆಯ ಅಣೆಕಟ್ಟೆ ಇದಾಗಿದೆ. ಜಿಲ್ಲೆಯ ವ್ಯವಸಾಯ, ಕುಡಿಯುವ ನೀರು, ಅಲ್ಲದೆ ಮೈಸೂರು, ಬೆಂಗಳೂರು ಮಹಾನಗರದ ಜನರೂ ಕುಡಿಯುವ ನೀರಿಗೆ ಇದೇ ಅಣೆಕಟ್ಟೆಯನ್ನು ಅವಲಂಬಿಸಲಾಗಿದೆ. ಇದರಿಂದ ಅಣೆಕಟ್ಟೆಯ ಸುರಕ್ಷತೆ, ಕಾರ್ಯನಿರ್ವಹಣಾ ಸಾಮರ್ಥ್ಯದ ಬಗ್ಗೆ ಪರಿಶೀಲಿಸಿ, ಸೂಕ್ತ ಮುನ್ನೆಚ್ಚರಿಕಾ ಕ್ರಮವಹಿಸುವ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.
ಇನ್ನು ಅಣೆಕಟ್ಟೆ ನಿರ್ಮಾಣ ಮಾಡುವ ಕಾಲದಲ್ಲಿ ಹೈ ಡ್ಯಾಂ ತಂತ್ರಜ್ಞಾನ ಇರಲಿಲ್ಲ. ಇದರಿಂದ ದೊಡ್ಡ ಗಟ್ಟಿ ಇಡಿ ಕಲ್ಲುಗಳಿಂದ ನಿರ್ಮಾಣವಾಗಿದೆ. ಹಾಗಾಗಿ ಪ್ರಸ್ತುತ ಆಧುನಿಕ ತಂತ್ರಜ್ಞಾನದೊಂದಿಗೆ ಅಣೆಕಟ್ಟೆಯನ್ನು ಸುಭದ್ರಗೊಳಿಸಲು ಕ್ರಮ ವಹಿಸಬೇಕು. ಅಣೆಕಟ್ಟೆಯಲ್ಲಿ ಡ್ರೈನೇಜ್ ಗ್ಯಾಲರಿ ಇಲ್ಲದೇ ಇರುವುದರಿಂದ ಸೀಪೇಜ್ ನಿರ್ವಹಣೆ ಸರಿಯಾಗಿ ಆಗುತ್ತಿದೆಯೇ ಎಂಬ ಬಗ್ಗೆ ತಜ್ಞರಿಂದ ಪರೀಕ್ಷಿಸಿ ವರದಿ ಪಡೆದು ಒಂದು ವೇಳೆ ತೊಂದರೆ ಇದ್ದರೆ ಸರಿಪಡಿಸುವ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ಇದಲ್ಲದೆ ಅಣೆಕಟ್ಟೆಯಲ್ಲಿ ನೀರು ತುಂಬಿದಾಗ ಹೊರಬಿಡಲು ಬಳಸುವ ಗೇಟ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹ್ಯಾಂಗ್ ಮಾಡಿರುವ ಗೇಟ್‌ಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬದಲಾಯಿಸುವ ಕೆಲಸವಾಗುತ್ತಿದೆ. ಈ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸಲು, ಡ್ರೈ ರನ್ ಮಾಡಿ ಗೇಟ್‌ಗಳು ಒತ್ತಡ ತಡೆದುಕೊಳ್ಳಬಲ್ಲವೇ ಎಂಬುದನ್ನು ಪರಿಶೀಲಿಸಲು ತಂತ್ರಜ್ಞರ ತಂಡವನ್ನು ಕಳುಹಿಸಿಕೊಡಬೇಕು. ಡ್ಯಾಂನ ಕಾರ್ಯನಿರ್ವಹಣೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕು. ಪ್ರವಾಹದಲ್ಲಿ ಸುರಕ್ಷತೆ ಬಗ್ಗೆ ಲಕ್ಷೃ ಕೊಡುವುದು ಮಳೆಗಾಲದಲ್ಲಿ ಪ್ರವಾಹ ಬಂದಾಗ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಮುಂಚಿತವಾಗಿ ಯೋಜಿಸಿ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಬೇಕಿದೆ ಎಂದು ಹೇಳಿದ್ದಾರೆ.
ಪ್ರಮುಖವಾಗಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದೆಯೇ ಎಂದು ಸರ್ವೇ ಮಾಡಬೇಕಿದೆ. ಹಾಗೇನಾದರೂ ಆಗಿದ್ದಲ್ಲಿ ತೆರವು ಮಾಡಲು ಕ್ರಮ ವಹಿಸಬೇಕು. ಈ ಭಾಗದ ಲಕ್ಷಾಂತರ ಕುಟುಂಬಗಳ ಜೀವನಾಧಾರವಾಗಿ ಈ ಅಣೆಕಟ್ಟೆ ಇರುವುದರಿಂದ ರಾಜ್ಯಸರ್ಕಾರ ಇದರ ಸುರಕ್ಷತೆ ಹಾಗೂ ಸುಸ್ಥಿತಿಯ ಬಗ್ಗೆ ಆದ್ಯತೆಯ ಮೇಲೆ ಗಮನ ಹರಿಸಬೇಕು ಎಂದು ಇಬ್ಬರು ಶಾಸಕರು ಮನವಿ ಮಾಡಿದ್ದರು.