ಜನವರಿ 17ರ ಮುಷ್ಕರ ಯಶಸ್ವಿಗೊಳಿಸುವಂತೆ ರಾಜ್ಯ ಲಾರಿ ಮಾಲೀಕರು ಹಾಗೂ ಚಾಲಕರ ಒಕ್ಕೂಟದ ಮನವಿ

21
Published on

ಮೈಸೂರು: ಚಾಲಕರಿಗೆ ಅನನುಕೂಲವಾಗುವಂತೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕಾಯ್ದೆ ವಿರುದ್ಧ ಜ.17ರಂದು ದೇಶವ್ಯಾಪಿ ಮುಷ್ಕರ ನಡೆಯಲಿದ್ದು, ಅಂದು ಯಾವುದೇ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ರಾಜ್ಯ ಲಾರಿ ಮಾಲೀಕರು ಹಾಗೂ ಚಾಲಕರ ಒಕ್ಕೂಟದ ಅಧ್ಯಕ್ಷ ನವೀನ್ ರೆಡ್ಡಿ ಹೇಳಿದರು.
ನಗರದ ಹಳೆ ಆರ್‌ಎಂಸಿ ಬಳಿ ಮುಷ್ಕರಕ್ಕೆ ಸಂಬಂಧಿಸಿದಂತೆ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಲಾರಿ ಮಾಲೀಕರು, ಚಾಲಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಂದು ಮಧ್ಯ ರಾತ್ರಿಯಿಂದ ಲಾರಿ ಮುಷ್ಕರ ನಡೆಸುವುದು. ರಾಜ್ಯದ ಎಲ್ಲ ಟ್ರಕ್ ಚಾಲಕರು ಮುಷ್ಕರದಲ್ಲಿ ಭಾಗವಹಿಸಲಿದ್ದು, ಯಾವುದೇ ವಾಹನ ರಸ್ತೆಗೆ ಇಳಿಯಬಾರದು. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಪ್ರಕಾರ, ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಕೇಂದ್ರದ ಈ ನಿರ್ಧಾರ ನಿರಂಕುಶವಾಗಿದೆ. ಆತುರದ ನಿರ್ಧಾರಕ್ಕೆ ಬರುವ ಮೊದಲು ಚಾಲಕರನ್ನು ಸಂಪರ್ಕಿಸಿಲ್ಲ ಎಂದರು.
ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ, ಅಜಾಗರೂಕ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತವನ್ನು ಉಂಟು ಮಾಡುವ ಮತ್ತು ಪೊಲೀಸರಿಗೆ ಅಥವಾ ಯಾವುದೇ ಸರ್ಕಾರಿ ಅಧಿಕಾರಿಗೆ ತಿಳಿಸಲು ವಿಫಲರಾದ ಚಾಲಕರು 7 ಲಕ್ಷ ರೂ. ವರೆಗೆ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಇದು ಅವೈಜ್ಞಾನಿಕ. ಯಾವುದೇ ಅಪಘಾತ ಉಂಟಾದರೆ ಸ್ಥಳದಲ್ಲಿ ಚಾಲಕ ಸಿಕ್ಕರೆ ಪರಿಸ್ಥಿತಿ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಪ್ರಾಣವೇ ಹೋಗಬಹುದು. ಆ ಕುಟುಂಬ ಏನಾಗಬೇಕು ಎಂದು ಪ್ರಶ್ನಿಸಿದರು.
ಹೊಸ ನಿಯಮಗಳನ್ನು ಇನ್ನೂ ಜಾರಿಗೆ ತಂದಿಲ್ಲ ಮತ್ತು ಎಐಎಂಟಿಸಿಯೊಂದಿಗೆ ಸಮಾಲೋಚಿಸಿದ ನಂತರವೇ ಜಾರಿಗೆ ತರಲಾಗುವುದು ಎಂದು ಸರ್ಕಾರ ಸಾರಿಗೆ ಸಂಸ್ಥೆಯ ಸದಸ್ಯರಿಗೆ ಭರವಸೆ ನೀಡಿದೆ. ಆದರೆ ಈ ಭರವಸೆಯನ್ನು ಲಿಖಿತವಾಗಿ ನೀಡದ ಕಾರಣ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಬಿ. ಕೋದಂಡರಾಮು ಮಾತನಾಡಿ, ರಾಷ್ಟ್ರದಾದ್ಯಂತ ಮುಷ್ಕರ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ಲಾರಿ, ಟ್ರಕ್, ಗೂಡ್ಸ್ , ಖಾಸಗಿ ಬಸ್, ಆಟೋ, ಮ್ಯಾಕ್ಸಿಕ್ಯಾಬ್, ಕಾರು ಸೇರಿದಂತೆ ಸಾರಿಗೆಯ ಇತ್ಯಾದಿ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಎಲ್ಲರೂ ಅಂದು ವಾಹನಗಳನ್ನು ನಿಲ್ಲಿಸಿಕೊಂಡು ಕೇಂದ್ರ ಸರ್ಕಾರಕ್ಕೆ ನಮ್ಮ ಒತ್ತಾಯ ಕೇಳುವಂತೆ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿ ಕಚೇರಿಯ ಬಳಿ ಚಾಲಕರಿಗೆ ಮಾರಕವಾಗಿರುವ ಕಾನೂನು ವಾಪಸ್ ಆಗುವವರೆಗೆ ನಿರಂತರವಾಗಿ ಪ್ರತಿಭಟನೆ ನಡೆಸುವುದು. ಇದಕ್ಕೆ ಎಲ್ಲರ ಬೆಂಬಲ ಬೇಕು ಎಂದು ಕೋರಿದರು.
ಮುಖಂಡರಾದ ಚಂದ್ರಶೇಖರ್ , ಪ್ರದೀಪ್, ವಸೀಮ್, ಕೃಷ್ಣಕುಮಾರ್, ಅಬ್ದುಲ್ ಖಾದರ್ ಶಾಹಿದ್ , ಶ್ರೀನಿವಾಸ್, ಅಸ್ಗರ್, ಅಕ್ರಂ ಖಾನ್, ಪೃಥ್ವಿರಾಜ್, ಶ್ರೀನಿವಾಸ್‌ರಾವ್, ನಾಗರಾಜ್, ಶ್ರೀನಿವಾಸ್‌ಮಿತ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net