

ಸವಣೂರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಬಿಇಒ ಎಂ.ಎಫ್. ಬಾರ್ಕಿ ಅವರ ಮೂಲಕ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ದೊರಕುವ ಸೌಲಭ್ಯಗಳನ್ನು ನೀಡಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ನೇಮಕ ಮಾಡಿಕೊಳ್ಳಬೇಕು. ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಮತ್ತು ಉಪ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇದ್ದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಸೇವಾ ಜೇಷ್ಠತಾ ಆಧಾರದ ಮೇಲೆ ಅಧಿಕ ಪ್ರಭಾರದಲ್ಲಿರಿಸಬೇಕು. ಪ್ರತ್ಯೇಕ ದೈಹಿಕ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು ಇತ್ಯಾದಿ ಬೇಡಿಕೆಗಳನ್ನು ಜುಲೈ ಅಂತ್ಯದ ಒಳಗಾಗಿ ಈಡೇರಿಸಿ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಐ.ಎಸ್. ಮುದಗಲ್, ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಿ. ಮುಳ್ಳಳ್ಳಿ, ಎನ್.ಎಂ. ಪಾಟೀಲ, ಆರ್.ವೈ. ಮುದೆನೂರ, ಎಸ್.ಡಿ. ದೇವಗಪ್ಪನವರ, ಪಿ.ಆರ್. ಕೋಪರ್ಡೆ, ಎಸ್.ಎಸ್. ಸಣ್ಣಬೆಣ್ಣಿ, ಪಿ.ಎನ್. ಮಂಟಗಣಿ, ಎಸ್.ವಿ. ಬಳಿಗಾರ, ವಿ.ಎಚ್. ಸಣ್ಣಶಿವಣ್ಣನವರ, ಎಂ.ಎ. ಬರದೂರ, ಪಿ.ಕೆ. ಸಾವಕ್ಕನವರ, ಎಸ್.ಬಿ. ರಡ್ಡೇರ, ಎಸ್.ಬಿ. ಪಾಟೀಲ, ಶಿವಪ್ಪ ಮತ್ತೂರ, ಈರಮ್ಮ ಗೊದವಾಲ, ಗೀತಾ ಕುಂದಗೋಳ, ಬಸವರಾಜ ಹಂಚಿನಾಳ, ಮಂಜುನಾಥ ತಳವಾರ, ಸಂತೋಷ ತೋಟದ, ಲತಾ ಪಾಟೀಲ, ಎಸ್.ಬಿ. ಪಶುಪತಿಹಾಳ, ಗೊಣೆಪ್ಪ ದೊಡ್ಡಮನಿ, ಆರ್. ಮೌಲಾಸಾಬನವರ ಇತರರು ಇದ್ದರು.