ಬಿತ್ತನೆ ಬೀಜಗಳ ದರ ಕಡಿಮೆ ಮಾಡಲು ಆಗ್ರಹಿಸಿ ರೈತರ ಮನವಿ

AKRS MANAVI TO ADC
ವಿಜಯಪುರದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಗೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅರವಿಂದ ಕೆ. ಕುಲಕರ್ಣಿ, ಬಾಲಪ್ಪಗೌಡ ಲಿಂಗದಳ್ಳಿ, ಗುರಲಿಂಗಪ್ಪ ಪಡಸಲಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಬಿತ್ತನೆ ಬೀಜಗಳ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಗುರುವಾರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕೆ. ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಭೀಕರ ಬರ ಆವರಿಸಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಹಾಳಾಗಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿ ಮಧ್ಯೆ ಸರ್ಕಾರ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದರು.

ರಾಜ್ಯ ಸರ್ಕಾರ ಜನ ವಿರೋಧಿ ಹಾಗೂ ರೈತ ವಿರೋಧಿ ಅನುಪಯುಕ್ತ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡುತ್ತಿಲ್ಲ. ಈಗ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದ ರೈತರಿಗೆ ಬಿತ್ತನೆ ಬೀಜದ ದರ ಹೆಚ್ಚಿಸುವ ಮೂಲಕ ರೈತರಿಗೆ ಮತ್ತಷ್ಟು ಸಾಲದ ಹೊರೆ ಹಾಕಲು ಮುಂದಾಗಿದೆ. ಕಳೆದ ವರ್ಷ ಐದು ಕೆಜಿ ತೊಗರಿ ಬೀಜಕ್ಕೆ 525 ರೂ.ಗಳವರೆಗೆ ಇದ್ದ ದರವನ್ನು 770 ಕ್ಕೆ ಏರಿಕೆ ಮಾಡಿದೆ. ಹೆಸರು 5 ಕೆಜಿಗೆ 501 ರಿಂದ 785 ರೂ.ಗಳಿಗೆ ಇನ್ನುಳಿದ ಬಿತ್ತನೆ ಬೀಜಗಳ ದರ ದುಪ್ಪಟ್ಟು ಹೆಚ್ಚಿಸಲಾಗಿದೆ ಮತ್ತು ಗೊಬ್ಬರದ ದರವನ್ನೂ ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹೊರೆ ಬೀಳುತ್ತಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಹೆಚ್ಚಿಸಿದ ಬಿತ್ತನೆ ಬೀಜಗಳ ದರವನ್ನು ಮೊದಲಿನ ದರಕ್ಕೆ ವಿತರಿಸಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಬಾಲಪ್ಪಗೌಡ ಲಿಂಗದಳ್ಳಿ, ಗುರಲಿಂಗಪ್ಪ ಪಡಸಲಗಿ, ಚಂದ್ರಾಮ ತೆಗ್ಗಿ, ಚನಬಸಪ್ಪ ಸಿಂಧೂರ, ನಿಂಗರಾಯ ಮುತ್ಯಾ, ದಾವಲಸಾ ನಧಾಪ್, ಮಹೇಶ ಯಡಹಳ್ಳಿ, ಮಲ್ಲಪ್ಪ ಪಡಸಲಗಿ, ಗಿರಿಮಲ್ಲಪ್ಪ ದೊಪಡಮನಿ, ವಿಠ್ಠಲ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net