ಶೌಚಗೃಹ ನಿರ್ಮಾಣಕ್ಕೆ ಅಂಗವಿಕಲರ ಮನವಿ

11 NRD 6
Published on

ನರಗುಂದ: ತಾಲೂಕಿನ ಅಂಗವಿಕಲರಿಗೆ ಹಿಂದೆ ನೀಡಿದ ಭರವಸೆಯಂತೆ ಶೌಚಗೃಹ ನಿರ್ಮಾಣ ಹಾಗೂ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆ, ಆಶ್ರಯ ಮನೆಗಳ ಮಂಜೂರು ಮಾಡುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಪರುಶುರಾಮ ಗುಡದಾರಿ ಅವರಿಗೆ ಅಂಗವಿಕಲರು ಸೋಮವಾರ ಮನವಿ ಸಲ್ಲಿಸಿದರು.

ಅಂಗವಿಕಲರಿಗಾಗಿ ಮೀಸಲಿಟ್ಟ ಅನುದಾನದಲ್ಲಿ ಶೌಚಗೃಹ ಹಾಗೂ ಇತರ ಮೂಲಸೌಕರ್ಯಗಳನ್ನು ಒದಗಿಸಲು ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಇನ್ನೂ ಸೌಲಭ್ಯಗಳನ್ನು ನೀಡಲು ಪುರಸಭೆ ಹಿಂದೇಟು ಹಾಕುತ್ತಿದೆ. ಸರ್ಕಾರದಿಂದ ಬರುವ ಪಿಂಚಣಿಯಲ್ಲಿ ಕಷ್ಟದಿಂದ ಜೀವನ ನಡೆಸುತ್ತಿದ್ದೇವೆ. ನಮಗೆ ಯಾವುದೇ ಆದಾಯವಿಲ್ಲ. ಶೌಚಗೃಹ ನಿರ್ಮಾಣಕ್ಕೆ 20 ಸಾವಿರ ರೂ. ಖರ್ಚು ಇದ್ದು, ಭರಿಸುವುದು ಕಷ್ಟದಾಯಕ ಎಂದು ತಿಳಿಸಿದ್ದಾರೆ.

ಪುರಸಭೆ ಅನುದಾನದಲ್ಲಿ ತ್ರಿಚಕ್ರ ವಾಹನ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಕೂಡಲೇ ತ್ರಿಚಕ್ರವಾಹನ ನೀಡುವ ಕಾರ್ಯವಾಗಬೇಕು. ಪುರಸಭೆಯ ವಿವಿಧ ಯೋಜನೆಯ ಅನುದಾನದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿಕೊಡುವಂತೆ ಮುಖ್ಯಾಧಿಕಾರಿಗೆ ಕೋರಿದರು.

ವಿಶೇಷ ಚೇತನರ ಸಂಘದ ತಾಲೂಕಾಧ್ಯಕ್ಷ ಇಬ್ರಾಹಿಂ ಸವಟಗಿ, ಉಪಾಧ್ಯಕ್ಷ ಫಕೀರಪ್ಪ ಮೇಗಲಮನಿ, ನೇತಾಜಿ ನರಗುಂದ, ಈಶ್ವರ ಕುಂಬಾರ, ಭೀಮಪ್ಪ ಚುನಮರಿ, ಸೈಯದ್ ಖಲೀಪ್, ರಮೇಶ ಶೆಳಕೆ, ಶಿವಾನಂದ ಹಾದಿಮನಿ, ಗೌರಮ್ಮ ಬೆಂಗೇರಿ, ಲಕ್ಷ್ಮೀ ಲಮಾಣಿ, ರೇಣುಕಾ ಬುಳಗಣ್ಣವರ, ಸುಹಾಸಿನಿ ಘಾಟ್ಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net