

ಮಂಡ್ಯ: ಹಾವೇರಿ ಜಿಲ್ಲೆಯ ಸಾರ್ವಜನಿಕ ಸ್ಥಳದಲ್ಲಿ ನಿಯಮಬಾಹಿರವಾಗಿ ಅಳವಡಿಸಿದ್ದ ಫ್ಲೆಕ್ಸ್ ತೆರವುಗೊಳಿಸಿದ ನಗರಸಭೆ ಪೌರಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯನ್ನು ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘ ತೀವ್ರವಾಗಿ ಖಂಡಿಸಿದೆ. ಅಂತೆಯೇ ಪೌರ ನೌಕರರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನಿಯಮಬಾಹಿರವಾಗಿ ಅಳವಡಿಸಿದ್ದ ಫ್ಲೆಕ್ಸ್ ತೆರವುಗೊಳಿಸಿದ ಹಾವೇರಿ ನಗರಸಭೆಯ ಪೌರಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಅನ್ವಯಿಸಬೇಕು. ಇದಲ್ಲದೆ ರಾಜ್ಯದ ಉದ್ದಗಲಕ್ಕೂ ಪೌರ ನೌಕರರ ಮೇಲೆ ದಿನನಿತ್ಯ ಹಲ್ಲೆಗಳು ನಡೆಯುತ್ತಿದ್ದು, ನೌಕರರಿಗೆ ಯಾವುದೆ ರಕ್ಷಣೆ ಇಲ್ಲವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ನಗರದ ಸ್ವಚ್ಛತೆ, ಬೀದಿ ದೀಪದ ಅವ್ಯವಸ್ಥೆ ನಿವೇಶನಗಳ ಅಳತೆ, ಪ್ಲಾಸ್ಟಿಕ್ ವಶ, ಅಕ್ರಮ ಕಟ್ಟಡ, ಅಕ್ರಮ ಫ್ಲೆಕ್ಸ್ ತೆರವು ಎಲ್ಲ ಪ್ರಕ್ರಿಯೆಗಳಲ್ಲಿ ಪೌರ ನೌಕರರನ್ನು ಮುಂಚೂಣಿಯಲ್ಲಿ ತೊಡಗಿಸಲಾಗುತ್ತದೆ. ಪರಿಣಾಮ ಸಾರ್ವಜನಿಕರು ಯಾವುದೆ ಕಾನೂನಿನ ಭಯವಿಲ್ಲದೆ ಏಕಾಏಕಿ ಪೌರನೌಕರರ ಮೇಲೆ ಹಲ್ಲೆ ನಡೆಸುತ್ತಾರೆ. ಈ ಸಂಧರ್ಭಗಳಲ್ಲಿ ಸ್ಥಳೀಯ ಒತ್ತಡ ಪ್ರಭಾವದ ಕಾರಣಕ್ಕೆ ಹಲ್ಲೆ ನಡೆಸಿದವರ ಮೇಲೆ ಯಾವುದೆ ಕ್ರಮವಾಗುವುದಿಲ್ಲ. ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಸಹ ನೌಕರರನ್ನು ಅವಾಚ್ಯವಾಗಿ ನಿಂದಿಸುವುದು ಹಲ್ಲೆ ಮಾಡುವುದು. ಸಾರ್ವಜನಿಕವಾಗಿ ಅವಹೇಳನ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದಾಗಿ ಪೌರನೌಕರರು ಅಭದ್ರತೆಯಲ್ಲೆ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಪೌರನೌಕರರ ಸುರಕ್ಷೆ ಖಾತ್ರಿಗೊಳಿಸಲು ಮುಂದಿನ ಅಧಿವೇಶನದಲ್ಲಿ ಪೌರನೌಕರರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು.ಈ ಕಾಯ್ದೆಯು ಹಲ್ಲೇ ನಿಂದನೆ ನಡೆಸುವ ವ್ಯಕ್ತಿಗಳ ವಿರುದ್ದ ಕ್ರಮಗಳನ್ನು ಖಾತ್ರಿಗೊಳಿಸಬೇಕು. ಫ್ಲೆಕ್ಸ್ ಅಳವಡಿಕೆ ಹಾಗೂ ತೆರವಿನ ಸಂಬಂದ ಅಗತ್ಯ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು. ಅಂತೆಯೇ ಹೊರಗುತ್ತಿಗೆ ನೌಕರರಿಗೂ ಆರೋಗ್ಯ ವಿಮೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ನೌಕರರ ಆಗ್ರಹವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಹೊರಗುತ್ತಿಗೆ ನೌಕರರಿಗೂ ಆರೋಗ್ಯ ವಿಮೆ ಜಾರಿಗೆ ಸ್ಥಳದಲ್ಲಿಯೇ ಇದ್ದ ನಗರಸಭೆ ಆಯುಕ್ತೆ ಪಂಪಾಶ್ರೀಗೆ ಸೂಚನೆ ನೀಡಿದರು. ಇದಕ್ಕು ಮುನ್ನಾ ನಗರಸಭೆ ಎದುರು ಜಮಾಯಿಸಿದ್ದ ಪೌರಕಾರ್ಮಿಕರು, ಹೊರಗುತ್ತಿಗೆ ನೌಕರರು, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್‌ಗೆ ಮನವಿ ಸಲ್ಲಿಸಿದರು. ಈ ಸಂಬಂಧ ಪೌರಾಡಳಿತ ಸಚಿವರಿಗೆ ಪತ್ರ ಬರೆದು ಪೌರಕಾರ್ಮಿಕರ ರಕ್ಷಣೆಗೆ ಅಗತ್ಯಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ನೇರಪಾವತಿ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗರಾಜು, ಖಾಯಂ ಪೌರಕಾರ್ಮಿಕರ ಸಂಘದ ಮುತ್ತಾಲಯ್ಯ, ನಂಜುಂಡ, ಮಹದೇವ, ರಾಜೇಶ್, ಶಿವು, ಲೋಕನಾಥ್ ಇತರರಿದ್ದರು.