ನೀರಿನ ಬಾಟಲ್ ಮಾರಾಟ ಮಾಡದಂತೆ ಮನವಿ

SANTHOSH ANVEKAR
Published on

ಮಡಿಕೇರಿ: ೨ ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದಂತೆ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ವರ್ತಕರಲ್ಲಿ ಮನವಿ ಮಾಡಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್‌ನ ನಗರಾಧ್ಯಕ್ಷ ಸಂತೋಷ್ ಅಣ್ವೇಕರ್, ಸ್ವಚ್ಛ ಪರಿಸರಕ್ಕಾಗಿ ೨ ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದಂತೆ ಸಗಟು ವ್ಯಾಪಾರಸ್ಥರು ಹಾಗೂ ಚಿಲ್ಲರೆ ಮಾರಾಟ ಅಂಗಡಿ ಮಾಲೀಕರಲ್ಲಿ ಕಳೆದ ಜನವರಿಯಿಂದ ಮನವಿ ಮಾಡಿಕೊಳ್ಳಲಾಗಿದೆ. ಇದೇ ಆ.೧ ರಿಂದ ಈ ನೀರಿನ ಬಾಟಲಿಗಳ ಮಾರಾಟವನ್ನು ನಗರಸಭೆ ಕಡ್ಡಾಯವಾಗಿ ನಿಷೇಧಿಸಿದೆ ಎಂದು ತಿಳಿಸಿದ್ದಾರೆ.

೨೦೨೪-೨೫ರ ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶದ ಪ್ರಕಾರ ೪೫ ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಡಿಕೇರಿ ನಗರಕ್ಕೆ ಭೇಟಿ ನೀಡಿದ್ದಾರೆ. ಕನಿಷ್ಠ ೨೫ ರಿಂದ ೩೦ ಲಕ್ಷ ನೀರಿನ ಬಾಟಲ್ ಮಡಿಕೇರಿ ನಗರ ಒಂದರಲ್ಲೇ ಕಂಡು ಬಂದಿದೆ. ಪರಿಸರದ ಮೇಲೂ ನೀರಿನ ಪ್ಲಾಸ್ಟಿಕ್ ಬಾಟಲಿಗಳು ದುಷ್ಪರಿಣಾಮ ಉಂಟು ಮಾಡುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ನಗರಸಭೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ವರ್ತಕರು ೨ ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದೆ ಮಡಿಕೇರಿ ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಸಂತೋಷ್ ಅಣ್ವೇಕರ್ ಮನವಿ ಮಾಡಿದ್ದಾರೆ.

ನಗರದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಗೆ ನಿಷೇಧವಿದ್ದರೂ ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗುತ್ತಿದೆ. ನಗರದ ಹಿತದೃಷ್ಟಿಯಿಂದ ವರ್ತಕರು ಹಾಗೂ ಗ್ರಾಹಕರು ಸ್ವಯಂ ಪ್ರೇರಿತರಾಗಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದ ಅವರು, ವ್ಯಾಪಾರೋದ್ಯಮ ಪರವಾನಗಿಯನ್ನು ನವೀಕರಿಸದೆ ಇರುವ ನಗರದ ವರ್ತಕರು ತಕ್ಷಣ ನವೀಕರಣಗೊಳಿಸುವಂತೆ ಸಂತೋಷ್ ಅಣ್ವೇಕರ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net