

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಅಣ್ಣೇಶ್ವರ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಒತ್ತಾಯಿಸಿದರು.
ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಜಿಪಂ ಸಿಇಒ ಡಾ.ಕೆ.ಅನುರಾಧಾ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಬಿಲ್ ಕಲೆಕ್ಟರ್ ಮನೆಯಲ್ಲಿ ಅಕ್ರಮವಾಗಿ ದಾಖಲೆ ಪುಸ್ತಕಗಳು ದೊರೆತಿದ್ದು ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಈ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ .ಸರ್ಕಾರಕ್ಕೆ ಕಟ್ಟಬೇಕಿದ್ದ 12 ಲಕ್ಷ ರೂ.ತೆರಿಗೆಯನ್ನು ದುರುಪಯೋಗಪಡಿಸಿಕೊಳ್ಳುವ ಧೈರ್ಯ ಅವರಿಗೆ ಬಂದಿದ್ದಾರೂ ಹೇಗೆ ಎಂಬ ಅನುಮಾನ ಮೂಡುತ್ತಿದೆ ಅಕ್ರಮಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ನಿಜವಾದ ಬಡವರಿಗೆ ಹಕ್ಕುಪತ್ರ ನೀಡಿ: ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮಸ್ಥೆ ಅನಿತಾ ಹಾಗೂ ಅವರ ಸಂಗಡಿಗರು ಮಾತನಾಡಿ ಅಕ್ಲೇನಹಳ್ಳಿ, ಮಲ್ಲೇನಹಳ್ಳಿ ಹಾಗೂ ಯರ್ತಿಗಾನಹಳ್ಳಿಯಲ್ಲಿ 200 ಎಕರೆಗೂ ಹೆಚ್ಚು ಸರ್ಕಾರಿ ಜಮೀ ನಿದ್ದು ಅಧಿಕಾರಿಗಳು ಹಾಗೂ ಸಿಬ್ಬಂದಿ ಅಕ್ರಮವಾಗಿ ಜಮೀನುಗಳನ್ನು ಕಬಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಗ್ರಾಮದ ಮುಖ್ಯಸ್ಥೆ ಅನಿತಾ ದೂರಿದರು. ಬಡವರ ನಿವೇಶನಕ್ಕಾಗಿ ಕಾಯ್ದಿರಿಸಿ ನಿಜವಾದ ಬಡವರಿಗೆ ಹಕ್ಕುಪತ್ರ ನೀಡಿ ಸ್ವಾವಲಂಬಿ ಬದುಕಿಗೆ ಸಹಕಾರ ನೀಡುವಂತೆ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತಿದ್ದೇನೆ. ಅಕ್ರಮ ಖಾತೆಗಳನ್ನು ವಜಾ ಮಾಡಿ ಅದೇ ಜಾಗದಲ್ಲಿ ನಮಗೆ ನಿವೇಶನ ಕಲ್ಪಿಸಿ ಕೊಡುವಂತೆ ಮನವಿ ಮಾಡಿದರು.
ಕ್ರ್ರಮಕ್ಕೆ ಸಿಇಒ ಭರವಸೆ: ನಿವೇಶನ ಹಂಚಿಕೆ ಸಂಬಂಧ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿ ತಾಲೂಕು ಆಡಳಿತದಿಂದ ಬೇರ್ಪಡಿಸಿ ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಿಲ್ಲ, ಸರ್ವೇ ನಂ. 55ರ ಸರ್ಕಾರಿ ಜಮೀನು ಲಭ್ಯವಿದ್ದರೆ ಇದನ್ನು ನಿವೇಶನ ಮಂಜೂರಾತಿ ಪಟ್ಟಿಗೆ ಸೇರಿಸಲು ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು ಹಾಗೂ ಪಂಚಾಯಿತಿಯಲ್ಲಿ ಅವ್ಯವಹಾರದ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಸಿಇಒ ಡಾ.ಕೆ.ಎನ್.ಅನುರಾಧಾ ಭರವಸೆ ನೀಡಿದರು.