ಯುವ ಬ್ರಿಗೇಡ್ ಕಾರ್ಯಕರ್ತರಿಂದ ಮನವಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಆಕ್ರೋಶ

Appeal from Youth Brigade activists Mandya
Published on

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಹಿಂದು ವಿರೋಧಿ ಶಕ್ತಿಗಳು ಸಂಘಟಿತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿವೆ. ಅಂತೆಯೇ ಧರ್ಮಸ್ಥಳದ ಗೌರವ ಹಾಗೂ ಘನತೆಗೆ ಧಕ್ಕೆ ತರುವಂತಹ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತಹವರ ವಿರುದ್ಧ ತಕ್ಷಣ ಕ್ರಮ ವಹಿಸಬೇಕೆಂದು ಆಗ್ರಹಿಸಿ ಯುವ ಬ್ರಿಗೇಡ್ ಕಾರ್ಯಕರ್ತರು ತಹಸೀಲ್ದಾರ್ ವಿಶ್ವನಾಥ್‌ಗೆ ಮನವಿ ಸಲ್ಲಿಸಿದರು.

ಭಾರತದ ಪ್ರತಿಷ್ಠಿತ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಪ್ರಮುಖವಾಗಿರುವ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ದಶಕಗಳಿಂದ ಸಮಾಜಮುಖಿ ಕಾರ್ಯಗಳ ಮೂಲಕ ಧಾರ್ಮಿಕ ಶ್ರದ್ಧೆಯ ಸಂಕೇತವಾಗಿ ಗುರುತಿಸಿಕೊಂಡಿದೆ. ಧಾರ್ಮಿಕ ಕಾರ್ಯಕ್ರಮ, ಕ್ಷೇತ್ರಗಳ ಜೀರ್ಣೋದ್ಧಾರ ಹಾಗೂ ಸಾಮಾಜಿಕ ಸೇವಾಕಾರ್ಯಗಳಿಂದ ಧರ್ಮಸ್ಥಳವು ಕೋಟ್ಯಂತರ ಭಕ್ತರ ಭರವಸೆಯ ಕೇಂದ್ರವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಹಿಂದು ವಿರೋಧಿ ಶಕ್ತಿಗಳು ಸಂಘಟಿತವಾಗಿ ಅಪಪ್ರಚಾರ ನಡೆಸುತ್ತಿದ್ದು, ಧರ್ಮಸ್ಥಳದ ಗೌರವ ಹಾಗೂ ಘನತೆಗೆ ಧಕ್ಕೆ ತರುವಂತಹ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುವುದರೊಂದಿಗೆ ಸಮಾಜದ ಶಾಂತಿ-ಸೌಹಾರ್ದತೆಗೂ ಧಕ್ಕೆ ತರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಈಗಾಗಲೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ತನಿಖೆ ನಡೆಸುತ್ತಿರುವ ಸಮಯದಲ್ಲಿಯೇ, ಸಾಮಾಜಿಕ ಜಾಲತಾಣಗಳ ಮೂಲಕ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಸಮೀರ್ ಎಂಬಾತನನ್ನು ವಿಚಾರಣೆಗೊಳಪಡಿಸಬೇಕು. ಈ ಷಡ್ಯಂತ್ರದ ಪಿತೂರಿ ಮಾಡಿರುವ ಸಮಾಜ ಘಾತುಕರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರು ಭಾವನಾತ್ಮಕವಾಗಿ ಉದ್ರಿಕ್ತರಾಗಿ ಕ್ರಮ ಕೈಗೊಳ್ಳುವ ಪರಿಸ್ಥಿತಿ ಉಂಟಾಗಬಹುದಾದ್ದರಿಂದ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಯುವ ಬ್ರಿಗೇಡ್‌ನ ಯೋಗೀಶ್, ಎಂ.ಬಿ.ರಮೇಶ್, ಎಸ್.ಶಿವಕುಮಾರ್ ಆರಾಧ್ಯ, ಪ್ರಸನ್ನಕುಮಾರ್, ಎಸ್.ಬಿ.ಪ್ರಮೋದ್, ಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net