ಕಚೇರಿಯ ನೋಟಿಸ್​ ಬೋರ್ಡ್​ಗೆ ವಿವಾಹ ಮಾಹಿತಿ ಲಗತ್ತಿಸಿ

Memorendom
ವಿವಾಹ ನೋಂದಣಿ ಸಂದರ್ಭದಲ್ಲಿ ಕಾನೂನು ಪಾಲನೆ ಮಾಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಕರ್ನಾಟಕದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಹಿರಿಯ ಉಪನೋಂದಣಾಧಿಕಾರಿ ಫಣೀಂದ್ರ ಎಚ್​.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ಜಯರಾಮ್​ ಅಂಬೆಕಲ್ಲು, ಶರತ್​ ಪೂಜಾರಿ, ಸುದರ್ಶನ ಕಪ್ಪೆಟ್ಟು, ವಿಕ್ರಂ ವಿ., ಸುಜಿತ್​ ನಿಟ್ಟೂರು, ಸುದೀಪ್​ ನಿಟ್ಟೂರು ಇದ್ದರು.
Published on

ಜಿಲ್ಲಾ ಶ್ರೀರಾಮ ಸೇನೆ ಕರ್ನಾಟಕ ಆಗ್ರಹ | ಉಪನೋಂದಣಾಧಿಕಾರಿಗೆ ಮನವಿ

ವಿಜಯವಾಣಿ ಸುದ್ದಿಜಾಲ ಉಡುಪಿ
ಅಂತರ್​ ಧರ್ಮೀಯ ವಿವಾಹ ನೋಂದಣಿ ಸಂದರ್ಭದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಕರ್ನಾಟಕದ ಉಡುಪಿ ಜಿಲ್ಲಾ ಘಟಕವು ಹಿರಿಯ ಉಪನೋಂದಣಾಧಿಕಾರಿ ಫಣೀಂದ್ರ ಎಚ್​.ಕೆ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.

ವಿವಾಹ ನೋಂದಣಿ ಮಾಡುವ 20 ದಿನ ಮೊದಲು ವಿವಾಹ ಆಗುವವರ ಸಂಪೂರ್ಣ ಮಾಹಿತಿಯನ್ನು ಕಚೇರಿಯ ನೋಟಿಸ್​ ಬೋರ್ಡ್​ಗೆ ಹಾಕುವ ಮೂಲಕ ಸಮಾಜದಲ್ಲಿ ಮುಂದೆ ಘಟಿಸುವ ಅನಾಹುತ ತಪ್ಪಿಸಬೇಕು ಎಂದು ವಿನಂತಿಸಿದರು.

ಕಾನೂನು ಉಲ್ಲಂಘನೆ

ಮನವಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಮ್​ ಅಂಬೆಕಲ್ಲು ಮಾತನಾಡಿ, ಇತ್ತೀಚೆಗೆ ಅಂತರ್​ ಧರ್ಮೀಯ ವಿವಾಹವು ಕೋಮು ಸ್ವರೂಪ ಪಡೆಯುತ್ತಿದೆ. ಗಲಭೆ, ಸಾಮರಸ್ಯ ಹಾಳು ಮಾಡುತ್ತಿರುವಂತಹ ಘಟನೆ ರಾಜ್ಯದಲ್ಲಿ ನಡೆಯುತ್ತಿದೆ. ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲಿಸದೆ, ವಿವಾಹವಾಗುವವರ ಮಾಹಿತಿಯ ಪ್ರತಿಯನ್ನೂ ಕಚೇರಿಯ ನೋಟಿಸ್​ ಬೋರ್ಡ್​ಗೆ ಲಗತ್ತಿಸದೆ ವಿವಾಹ ಮಾಡುತ್ತಿದ್ದಾರೆ. ಇದು ಮತಾಂತರ ತಡೆ ಕಾಯ್ದೆ -2022ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ ನೂರಾರು ಹತ್ಯೆ

ಲವ್​ ಜಿಹಾದ್​ ವಿರೋಧಿಸಿ ರಾಜ್ಯದಲ್ಲಿ 2009ರಲ್ಲಿ ಪ್ರಥಮ ಬಾರಿಗೆ ಶ್ರೀರಾಮ ಸೇನೆ ಧ್ವನಿ ಎತ್ತಿತು. ಒಂದಿಷ್ಟು ಲವ್​ ಜಿಹಾದ್​ ಪ್ರಕರಣ ತಡೆದು ಕೆಲ ಕುಟುಂಬ ನೆಮ್ಮದಿಯಿಂದ ಇರುವಂತೆ ಮಾಡಿದ್ದೇವೆ. 2023ರಲ್ಲಿ ರಾಜ್ಯದಲ್ಲಿ 53 ಲವ್​ ಜಿಹಾದ್​ ಹತ್ಯೆ ನಡೆದಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಹೀಗಾಗಿ ವಿವಾಹ ನೋಂದಣಿ ಕಚೇರಿಗಳಲ್ಲಿ ಕಾನೂನು ಪಾಲನೆ ಆಗಲೇಬೇಕಿದೆ ಎಂದು ಒತ್ತಾಯಿಸಿದರು.

ಜಿಲ್ಲಾ ವಕ್ತಾರ ಶರತ್​ ಪೂಜಾರಿ, ಪ್ರ.ಕಾರ್ಯದರ್ಶಿ ಸುದರ್ಶನ ಕಪ್ಪೆಟ್ಟು, ಜಿಲ್ಲಾ ಕಾರ್ಯದರ್ಶಿ ವಿಕ್ರಂ ವಿ., ಸಂಪರ್ಕ ಪ್ರಮುಖ್​ ಸುಜಿತ್​ ನಿಟ್ಟೂರು, ನಗರ ಅಧ್ಯಕ್ಷ ಸುದೀಪ್​ ನಿಟ್ಟೂರು ಉಪಸ್ಥಿತರಿದ್ದರು.

24×7 ಸಹಾಯವಾಣಿ ಆರಂಭ

ಲವ್​ ಜಿಹಾದ್​ ನಿಯಂತ್ರಣಕ್ಕಾಗಿ ಶ್ರೀರಾಮ ಸೇನೆ ವತಿಯಿಂದ ಮೇ 29ರಂದು ಟೋಲ್​ ಫ್ರೀ ಸಹಾಯವಾಣಿ ಆರಂಭಿಸಲಾಗುತ್ತಿದೆ. ಹುಬ್ಬಳ್ಳಿಯನ್ನು ಕೇಂದ್ರ ಘಟಕವನ್ನಾಗಿಸಿಕೊಂಡು ಬೆಂಗಳೂರು, ದಾವಣಗೆರೆ, ಮಂಗಳೂರು, ಗುಲ್ಬರ್ಗಾ ಮತ್ತು ಯಾದಗಿರಿಯಲ್ಲಿ ಸಹಾಯವಾಣಿ ಆರಂಭಿಸಲಾಗುತ್ತಿದೆ ಎಂದು ಜಯರಾಮ್​ ಅಂಬೆಕಲ್ಲು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net