

ಚಿಕ್ಕಮಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಎಚ್.ಡಿ ತಮ್ಮಯ್ಯ ಶಿಕ್ಷಕ ಸಮೂಹಕ್ಕೆ ಭರವಸೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಕೋರಿ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಖಾಸಗಿಯಾಗಿ ಭೇಟಿಮಾಡಿ ೨೦೧೬ ಕ್ಕಿಂತ ಮುಂಚೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಆದವರಿಗೆ ಅನ್ಯಾಯವಾಗದಂತೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ತರಲು ಒತ್ತಡ ತರುವುದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೂ ಚರ್ಚಿಸುವುದಾಗಿ ಭರವಸೆ ನೀಡಿದರು.
ಕಳೆದ ೨೦೧೭ ನೇ ಸಾಲಿನವರೆಗೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ೧ ರಿಂದ ೭ ಕ್ಕೆ ನೇಮಕವಾದ ಶಿಕ್ಷಕರು ಎಂದು ಪರಿಗಣಿಸಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ೨೦೧೭ ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಪದವಿ ಪೂರೈಸಿರುವ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರು ಎಂದು ಪರಿಗಣಿಸುವಂತೆ ಶಿಕ್ಷಕರ ಸಂಘ ನೀಡಿದ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಿರಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಜ್ಜಯ್ಯ, ಉಪಾಧ್ಯಕ್ಷೆ ಮೋಹನಾಕ್ಷಿ, ಪ್ರಮುಖರಾದ ಶ್ರೀಧರ್, ಗುರುಮೂರ್ತಿ, ರವಿಕುಮಾರ್, ಶಶಿಧರ್ ಮತ್ತಿತರರಿದ್ದರು.