

ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಖಾಸಗಿ ಕಂಪನಿಯೊಂದು ಅಕ್ರಮವಾಗಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಗ್ರಾಮಸ್ಥರು ಮಾತನಾಡಿ, ವಿದ್ಯುತ್ ಕಂಬ ಅಳವಡಿಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಹಸೀಲ್ದಾರ್ ಅವರಿಗೆ ಮನವರಿಕೆ ಮಾಡಿದರು.
ಕೆಪಿಟಿಸಿಎಲ್ ಸಂಬಂಧಿಸಿದ ಅನೇಕ ಕಂಬ ಬೀದಿಗಳಲ್ಲಿವೆ. ಆದರೆ, ಇದೀಗ ಇಂಟಗ್ರಾಮ ಖಾಸಗಿ ಕಂಪನಿಯೊಂದು ಕಂಬ ಅಳವಡಿಸುತ್ತಿದೆ. 11ಕೆವಿ ವಿದ್ಯುತ್ ಕಂಬದ ಜತೆ ತಂತಿ ಎಳೆಯಲು ಮುಂದಾಗಿದೆ. ಇದರಿಂದ ತೊಂದರೆಯಾಗುತ್ತಿದೆ. ಹಾಗಾಗಿ, ಕಂಬ ತೆರವುಗೊಳಿಸಿ ಬೇರೆ ಕಡೆಯಿಂದ ಅಳವಡಿಸಲಿ ಎಂದು ಮನವಿ ಮಾಡಿದರು.
ಹೋರಾಟಗಾರ ಹನುಮಂತಪ್ಪ ಮಾತನಾಡಿ, ಗ್ರಾಮಗಳಲ್ಲಿ ಕೆಲಸ ಮಾಡುವ ಮುನ್ನ ಗ್ರಾಪಂ ಅಧ್ಯಕ್ಷರು, ಪಿಡಿಒ ಗಮನಕ್ಕೆ ತರಬೇಕು. ಆದರೆ, ಖಾಸಗಿ ಕಂಪನಿಯವರೊಂದಿಗೆ ಕೆಲವರು ಶಾಮೀಲಾಗಿ ದೌರ್ಜನ್ಯದಿಂದ ಕಂಬ ಅಳವಡಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನಿಯ ಎಂದರು.
ವಿದ್ಯುತ್ ಪ್ರತಿಯೊಬ್ಬರಿಗೂ ಅವಶ್ಯಕ. ಹಾಗಾಗಿ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗ್ರಾಮದ ಮಧ್ಯ ಭಾಗದಿಂದ ಅಳವಡಿಸುತ್ತಿರುವುದು ನಮ್ಮ ವಿರೋಧವಿದೆ. ತಕ್ಷಣವೇ ಕಂಪನಿಯವರು ಕಂಬ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕಂಪನಿಯೂ ಕೆಲಸ ಮಾಡುವ ಜತೆಗೆ ಗ್ರಾಮದಲ್ಲಿ ವೈಶಮ್ಯ, ದ್ವೇಷ ಭಾವನೆ ಮೂಡಿಸುತ್ತಿದೆ. ಕೆಲವರಿಗೆ ಹಣದಾಸೆ ತೋರಿಸಿ ಗುಂಪುಗಾರಿಕೆ ಮಾಡಿ ಹೋರಾಟ ಮಾಡುವವರನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ. ಯಾವುದೇ ಬೆದರಿಕೆಗಳಿಗೆ ಜಗ್ಗುವುದಿಲ್ಲ. ನಮ್ಮ ಹೋರಾಟ ನಿಲ್ಲುವುದಿಲ್ಲ. ಗ್ರಾಮದ ಜತೆಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ವಿದ್ಯುತ್ ಪೂರೈಸಲು ವಿದ್ಯುತ್ ಕಂಬ ಅಳವಡಿಸುವ ಖಾಸಗಿ ಕಂಪನಿಗಳು ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿವೆ. ಕೆಪಿಟಿಸಿಎಲ್ ರೀತಿ ಸೋಲಾರ್ ಕಂಬ ಅಳವಡಿಸಲಾಗಿದೆ. ಇದರಿಂದ ಯಾರಿಗೂ ತೊಂದರೆ ಇಲ್ಲ. ಸಾರ್ವಜನಿಕರು ಸಹಕರಿಸಬೇಕು. ಕಾನೂನು ಬಾಹಿರವಾಗಿ ಕಾಮಗಾರಿ ಮಾಡಿದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮದ ಮುಖಂಡರಾದ ಹಂಪಣ್ಣ, ರುದ್ರಪ್ಪ, ಕೊಟ್ರಪ್ಪ, ರಂಗಪ್ಪ, ಗೋಣೆಪ್ಪ, ಸಿದ್ದಪ್ಪ, ಸಂತೋಷ್, ಕೊಟ್ರೇಶ್ ಮತ್ತಿತರರಿದ್ದರು.