ಸಾಮಾಜಿಕ ಕಾರ್ಯಕರ್ತರಿಂದ ಉಪಲೋಕಾಯುಕ್ತರಿಗೆ ಮನವಿ

1004076934
Published on

ಚನ್ನಪಟ್ಟಣ

ನಗರದ ಶೆಟ್ಟಿಹಳ್ಳಿ ಕೆರೆ ಪುನರುಜ್ಜೀವನ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು, ಇದರ ಮಧ್ಯೆ ಕೆರೆಯ ಬಫರ್​ ವಲಯವನ್ನು ಗುರುತಿಸಿ, ಒತ್ತುವರಿ ತೆರವಿಗೆ ಆಗ್ರಹ ಕೇಳಿಬಂದಿದೆ.

ನಗರದ ಶೆಟ್ಟಿಹಳ್ಳಿ ಕೆರೆ ಸಾಕಷ್ಟು ಮಲೀನವಾಗುವ ಜತೆಗೆ ಒತ್ತುವರಿದಾರರ ಕಪಿಮುಷ್ಟಿಗೆ ಸಿಲುಕಿ ಅವಸಾನದ ಅಂಚಿಗೆ ತಲುಪಿತ್ತು. ಈ ಬಗ್ಗೆ ಹೋರಾಟಗಳು ಹಾಗೂ ಮಾಧ್ಯಮಗಳ ನಿರಂತರ ವರದಿ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ಕೆ.ಎನ್​.ಫಣೀಂದ್ರ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ಸಹ ನಡೆಸಿದರು.

ಇದರಿಂದಾಗಿ ಕೆರೆಯ ಸುಧಾರಣೆಗೆ ಸಂಬಂಧಿಸಿದವರು ಗಮನಹರಿಸಿ, ಕೆರೆ ಪುನರುಜ್ಜೀವನ ಕಾಮಗಾರಿಗೆ ಚಾಲನೆ ನೀಡಿದರು. ಲೇಕ್​ ಮ್ಯಾನ್​ ಆಫ್​ ಇಂಡಿಯಾ ಎಂದೇ ಹೆಸರಾಗಿರುವ ಡಾ.ಆನಂದ್​ ಮಲ್ಲಿಗವಾಡ ನೇತೃತ್ವದಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಆದರೆ, ಒತ್ತುವರಿ ತೆರವಿನ ಬಗ್ಗೆ ಸಂಬಂಧಿಸಿದವರು ಗಮನಹರಿಸುತ್ತಿಲ್ಲ ಎಂಬ ಆರೋಪವಿದ್ದು, ಸಾಮಾಜಿಕ ಕಾರ್ಯಕರ್ತರಾದ ಗಜೇಂದ್ರ ಸಿಂಗ್​ ಹಾಗೂ ಸುರೇಶ್​ ಎಂಬುವವರು ಮತ್ತೊಮ್ಮೆ ಉಪಲೋಕಾಯುಕ್ತರ ಮೊರೆ ಹೋಗಿದ್ದಾರೆ.

ಶೆಟ್ಟಿಹಳ್ಳಿ ಕೆರೆ ಪರಿಶೀಲನೆ ವೇಳೆ ಕೆರೆಯ ಬಫರ್​ ವಲಯವನ್ನು ಗುರುತಿಸಿ, ಒತ್ತುವರಿಯನ್ನು ತೆರವುಗೊಳಿಸಿ, ಸುತ್ತಲೂ ಬೇಲಿ ನಿರ್ಮಿಸುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದ್ದರು. ಆದರೆ, ಈವರೆಗೂ ಕೆರೆಯ ಬಫರ್​ ವಲಯ ಗುರುತಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಕೆರೆ ಅಂಗಳ ಮತ್ತು ಬಫರ್​ ವಲಯವನ್ನು ಗುರುತಿಸಿ ಒತ್ತುವರಿ ತೆರವುಗೊಳಿಸದೇ, ಕೆರೆಯನ್ನು ಯಥಾಸ್ಥಿತಿ ಇರುವಂತೆ ಸ್ವಚ್ಛತೆ ಮಾಡಿ ಅಭಿವೃದ್ಧಿಪಡಿಸುವ ಮೂಲಕ ಅನಧಿಕೃತ ಒತ್ತುವರಿ ಅಧಿಕೃತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬುದು ಸಾಮಾಜಿಕ ಕಾರ್ಯಕರ್ತರ ಆರೋಪವಾಗಿದೆ.

ಈ ಸಂಬಂಧ ದಾಖಲೆಗಳ ಸಮೇತ ಉಪಲೋಕಾಯುಕ್ತರ ಕಚೇರಿಗೆ ಮನವಿ ಸಲ್ಲಿಸಿರುವ ಗಜೇಂದ್ರ, ಶೆಟ್ಟಿಹಳ್ಳಿಕೆರೆ ಅಂಗಳ ಮತ್ತು ಬಫರ್​ ವಲಯವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣ ತೆರವಿಗೆ ರಾಜಕಾರಣಿಗಳು ಪರೋವಾಗಿ ತಡೆ ಮಾಡುತ್ತಿದ್ದಾರೆ. ಅನಧಿಕೃತ ಒತ್ತುವರಿ ತೆರವುಗೊಳಿಸುವ ಪೂರ್ವದಲ್ಲೆ ಕೆರೆಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯ ಬಫರ್​ ವಲಯವನ್ನು ಗುರುತಿಸಿ ನಂತರ ಒತ್ತುವರಿ ತೆರವುಗೊಳಿಸಿ ಕೆರೆ ಆವರಣ ಮತ್ತು ಬಫರ್​ ವಲಯದ ಸುತ್ತಲೂ ಬೇಲಿ ಹಾಕುವ ಮೂಲಕ ಕೆರೆಯನ್ನು ರಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಎಂದು ಜು.29 ರಂದು ಬೆಂಗಳೂರಿನ ಎಂ.ಎಸ್​ ಬಿಲ್ಡಿಂಗ್​ನಲ್ಲಿರುವ ಲೋಕಾಯುಕ್ತ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net