

ಮಂಡ್ಯ: ಸರ್ಕಾರಿ ನೌಕರರಿಗೆ ಸಂಬಂಧಿಸಿದ ಏಳನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಶಂಭುಗೌಡ ಮಾತನಾಡಿ, ಸರ್ಕಾರ 2017ರಲ್ಲಿ ರಚಿಸಿದ್ದ ವೇತನ ಆಯೋಗದ ವರದಿಯನ್ನು ಸಲ್ಲಿಸಿದ 6 ತಿಂಗಳಲ್ಲೇ ಜಾರಿಗೊಳಿಸಲಾಗಿತ್ತು. ಅದು ಅನುಷ್ಠಾನಗೊಂಡು 5 ವರ್ಷವಾಗಿರುವುದರಿಂದ ನೌಕರರ ವೇತನ ಮತ್ತು ಭತ್ಯೆಗಳನ್ನು 2022 ಜುಲೈ ತಿಂಗಳಿಂದ ಪರಿಷ್ಕರಿಸಬೇಕಾಗಿತ್ತು. ಸಂಘದ ಒತ್ತಡದಿಂದಾಗಿ ಹಿಂದಿನ ಸರ್ಕಾರ ಅದೇ ವರ್ಷದ ನವೆಂಬರ್‌ನಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿ ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು ಎಂದರು.
ಆರು ತಿಂಗಳೊಳಗೆ ವರದಿ ಪಡೆಯದ ಸರ್ಕಾರ ಆಯೋಗವನ್ನು ಎರಡು ಸಲ ಆರು ತಿಂಗಳ ಅವಧಿಗೆ ವಿಸ್ತರಿಸಿದೆ. ಈ ವರ್ಷ ಮಾರ್ಚ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇದರೊಂದಿಗೆ ಆಯೋಗ ರಚನೆಯಾಗಿ 19 ತಿಂಗಳು ಕಳೆದಿವೆ. ಇದರ ಮಧ್ಯೆ ಸಂಘ ಕೈಗೊಂಡ ಮುಷ್ಕರದಿಂದಾಗಿ ಸರ್ಕಾರ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ, ನೌಕರರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ನೀಡಿದ್ದ ವರದಿ ಅನುಷ್ಠಾನದ ಭರವಸೆ ಇನ್ನೂ ಈಡೇರಿಲ್ಲ. ಈಗಲಾದರೂ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಆಯೋಗದ ವರದಿ ಜಾರಿ ಜತೆಗೆ ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ 2.60 ಲಕ್ಷ ಖಾಲಿ ಹುದ್ದೆಗಳಿವೆ. ಹಾಲಿ ನೌಕರರಿಗೆ ಕಾರ್ಯಭಾರ ಹೆಚ್ಚಾಗಿ ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ, ಕೂಡಲೇ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಶಾಸಕರಿಗೆ ಮನವಿ ಸಲ್ಲಿಕೆ: ಡಿಸಿಗೆ ಮನವಿ ಸಲ್ಲಿಸಿದ ನೌಕರರು ಜಿಪಂ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದ ಶಾಸಕ ರವಿಕುಮಾರ್ ಗಣಿಗ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯದ 31 ಕಂದಾಯ ಜಿಲ್ಲೆ, 3 ಶೈಕ್ಷಣಿಕ ಜಿಲ್ಲೆ ಹಾಗೂ 183 ತಾಲೂಕುಗಳಲ್ಲಿ ಸಂಘದ ಶಾಖೆಗಳನ್ನು ಹೊಂದಿದ್ದು, ಸಮಸ್ತ 6 ಲಕ್ಷ ರಾಜ್ಯ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆಯಾಗಿದೆ. ಕಾರಣ ಇವರಿಗೆ ಪೂರಕವಾಗುವಂತೆ ರಾಜ್ಯ ಏಳನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಖಜಾಂಚಿ ಗೋಪಾಲ್, ಕಾರ್ಯದರ್ಶಿ ದೇವರಾಜು, ಆರ್.ವಿ.ಪ್ರಸನ್ನ, ಈಶ್ವರ್, ಶಶಿಧರ್ ಈಚಗೆರೆ ಇತರರಿದ್ದರು.