

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಅವಕಾಶಗಳನ್ನು ಶಾಸನ ಬದ್ದವಾಗಿ ಹೊಂದಲು ರಾಜ್ಯ ಸರ್ಕಾರ ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಿದೆ. ಈ ಕಾಯ್ದೆಯಡಿ ನಿಗದಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಸರ್ಕಾರ ಅವಕಾಶ ನೀಡಿದ್ದವು. ಇದರ ವಿರುದ್ಧ ಹೋರಾಟ ಮಾಡಿದ ಪರಿಣಾಮ 7ಡಿ ಮತ್ತು 7ಸಿ ಕಾಲಂಗಳನ್ನು ರದ್ದು ಪಡಿಸಲಾಗಿತ್ತು. ಆದರೆ 2024-25 ಹಾಗೂ 2025-26ನೇ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಒಳಗೊಂಡಂತೆ ಅನ್ಯಯೋಜನೆಗಳಿಗೆ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದ ಹಣ ಉಪಯೋಗಿಸುವ ಅವಕಾಶ ನೀಡಿರುವುದು ಖಂಡನೀಯ ಎಂದರು.
ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸದೇ ನೇರವಾಗಿ ಪರಿಶಿಷ್ಟರ ಕುಟುಂಬಗಳಿಗೆ ಹಂಚಿಕೆ ಮಾಡಿದರೆ ಪ್ರತಿ ಬಿಪಿಎಲ್ ಕುಟುಂಬಕ್ಕೂ ತಲಾ 20 ಲಕ್ಷ ರೂ ತಲುಪಬೇಕಾಗಿತ್ತು. ಆದರೆ ಸರ್ಕಾರ ಅಥವಾ ವಿರೋಧ ಪಕ್ಷವಾಗಲಿ ಬದ್ದತೆಯಿಂದ ಕೆಲಸ ಮಾಡದಿದ್ದರಿಂದ ದಲಿತ ಸಮುದಾಯದವರ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಾದರೂ ಪರಿಶಿಷ್ಟರ ಪಾಲಿನ ಹಣವನ್ನು ಅನ್ಯಕಾರ್ಯಕ್ರಮಗಳಿಗೆ ಉಪಯೋಗಿಸದೆ ’ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಬಳಸುತ್ತೇವೆ ಎಂದು ಘೋಷಣೆ ಮಾಡದಿದ್ದರೆ ಆ.21ರಂದು ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.
ಅಂತೆಯೇ ಅನ್ಯ ಯೋಜನೆಗಳಿಗೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಕಾಯ್ದೆ ಕಲಂ 24ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾರಾಗೃಹಕ್ಕೆ ಕಳುಹಿಸಬೇಕು. ಸರ್ಕಾರದ 38 ಇಲಾಖೆಯಲ್ಲಿ ಬ್ಯಾಕ್‌ಲಾಗ್ ಹುದ್ದೆ ಕುರಿತಂತೆ ಅಂಕಿ ಅಂಶ ನೀಡದಿರುವ ಇಲಾಖಾ ಮುಖ್ಯಸ್ಥರ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದತ್ತಾಂಶ ಪಡೆದು ತುರ್ತಾಗಿ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಜನಸಂಖ್ಯಾವಾರು ಒಳ ಮೀಸಲಾತಿ ಜಾರಿ ಮಾಡುವುದರ ಜತೆಗೆ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ನಂಜುಂಡಮೌರ್ಯ, ತಾಳಶಾಸನ ಮೋಹನ್, ಜಿಲ್ಲಾ ಸಂಘಟನಾ ಸಂಚಾಲಕರಾದ ನಂಜುಂಡಸ್ವಾಮಿ, ಗಣೇಶ್, ಪಾಪಮ್ಮ ಇತರರಿದ್ದರು.