

ತೇರದಾಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಥಳೀಯ ಪೌರ ಕಾರ್ಮಿಕರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಪುರಸಭೆ ಮ್ಯಾನೇಜರ್ ಮಲ್ಲಿಕಾರ್ಜುನ ಬಿ.ಪಾಟೀಲ ಅವರಿಗೆ ಸೋಮವಾರ ಸಲ್ಲಿಸಿದರು. ನಂತರ ತಹಸೀಲ್ದಾರ್‌ರಿಗೆ ಮತ್ತು ಪೊಲೀಸ್ ಠಾಣಾಧಿಕಾರಿಗಳಿಗೂ ಮನವಿ ಸಲ್ಲಿಸಿದರು.
ಪೌರಕಾರ್ಮಿಕ ಮಂಜುನಾಥ ರಾಯಣ್ಣವರ, ರವಿ ಬನಸೋಡೆ ಮತ್ತು ದಯಾನಂದ ಮಾಂಗ ಮಾತನಾಡಿ, ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷರು ಕರೆಕೊಟ್ಟ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಆರಂಭವಾಗಿರುವ ಪೌರಕಾರ್ಮಿಕರು ಹಾಗೂ ನೀರು ಸರಬರಾಜು ಕಾರ್ಮಿಕರು ಕೈಗೊಂಡಿರುವ ಮೌನ ಪ್ರತಿಭಟನೆ ಅಂಗವಾಗಿ ಏ. 6ರಿಂದ ಪಟ್ಟಣದ ಪುರಸಭೆ ಪೌರಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು ಹಾಗೂ ವಾಹನ ಚಾಲಕರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ. ರಾಜ್ಯ ಸರ್ಕಾರ ಪೌರಕಾರ್ಮಿಕರನ್ನು, ನೀರು ಸರಬರಾಜು ಕಾರ್ಮಿಕರನ್ನು ಹಾಗೂ ಕಸ ಸಂಗ್ರಹ ವಾಹನ ಚಾಲಕರನ್ನು ಖಾಯಂಗೊಳಿಸುವ ಮೂಲಕ ಸರ್ಕಾರವೇ ನೇರವೇತನ ಪಾವತಿಸಬೇಕು. ಕಳೆದ ಬಾರಿ ಖಾಯಂಗೊಳಿಸಿದ ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಯಿಂದ ವೇತನ ಸಮರ್ಪಕವಾಗಿ ಪಾವತಿಯಾಗುತ್ತಿಲ್ಲ. ಆ ಕಾರಣಕ್ಕಾಗಿಯೇ ತೇರದಾಳ ಪುರಸಭೆಯ ಪೌರಕಾರ್ಮಿಕರಿಗೆ, ನೀರು ಸರಬರಾಜಿನವರಿಗೆ ಆಗಾಗ್ಗೆ 8-10 ತಿಂಗಳವರೆಗೆ ವೇತನ ಪಾವತಿಯಾಗುವುದಿಲ್ಲ. ಹೀಗಾದರೆ ದಿನನಿತ್ಯ ಖರ್ಚು, ಮಕ್ಕಳ ಶಿಕ್ಷಣ ಹಾಗೂ ಆಸ್ಪತ್ರೆ ವೆಚ್ಚಗಳಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ರಾಜ್ಯದ ಒಕ್ಕೂಟ ಈ ಧರಣಿಗೆ ಕರೆ ನೀಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾವು ನಮ್ಮ ಕೆಲಸ ನಿರ್ವಹಿಸುತ್ತ ಮೌನ ಧರಣಿ ಆರಂಭಿಸಿದ್ದೇವೆ. ಆದ್ದರಿಂದ ಕೂಡಲೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಪೌರ ಕಾರ್ಮಿಕರಿಗೆ ಸರ್ಕಾರದ ಅನುದಾನದಲ್ಲಿ ವೇತನ ಪಾವತಿಯಾಗಬೇಕು, ನೀರು ಸರಬರಾಜು, ವಾಹನ ಚಾಲಕರು ಹಾಗೂ ಪುರಸಭೆ ವಿದ್ಯುತ್ ಸರಬರಾಜು ಸಿಬ್ಬಂದಿಯನ್ನು ಖಾಯಂಗೊಳಿಸಿ ನೇರವೇತನ ಪಾವತಿ ಮಾಡಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಧರಣಿ ಆರಂಭವಾಗಲಿದೆ ಎಂದರು.
ಮನವಿ ಸ್ವೀಕರಿಸಿದ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ ಮಾತನಾಡಿ, ಮನವಿ ಪತ್ರವನ್ನು ಮೇಲಾಧಿಕಾರಿಗಳ ಶಿಾರಸ್ಸಿನೊಂದಿಗೆ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು.
ಪ್ರತಾಪ ಕೊಡುಗೆ, ರವಿ ರೋಡಕರ, ಘಟಿಗೆಪ್ಪ ಕುಂಬಾರ, ರಘು ಗೋಠಡಕಿ, ಶಂಭು ಮಾಸ್ತಿ, ಅಶೋಕ ನಡುವಿನಕೇರಿ, ಮಶ್ಚೇಂದ್ರ ಗೋಠಡಕಿ, ಭರತೇಶ ಗುಡಕ್ಕನವರ, ಸುನೀಲ ಬಾಂವಿ, ಸಿದ್ದು ಮಾಂಗ, ಅಶೋಕ ಆಲಕನೂರ, ಭಾರತಿ ಮಾಸ್ತಿ, ಶೋಭಾ ಮಾಂಗ, ಗೌರವ್ವ ಮಾಸ್ತಿ, ಶೋಭಾ ಮಾಸ್ತಿ, ರೇಣುಕಾ ಸಿಂಗೆ, ಸಪ್ನಾ ಮಾಸ್ತಿ, ಕಾಂತವ್ವ ಬಿದರಿ ಮತ್ತಿತರರಿದ್ದರು.