

ಚನ್ನರಾಯಪಟ್ಟಣ: ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳ ನವೀಕರಣಕ್ಕೆ 2.89 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಬೆಂಗಳೂರಿನ ಕಚೇರಿಯಲ್ಲಿ ಗುರುವಾರ ಮನವಿ ಸಲ್ಲಿಸಿದರು.
ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಕೆಲವು ಕಟ್ಟಡಗಳು ಶಿಥಿಲಗೊಂಡು, ರೋಗಿಗಳಿಗೆ, ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ. ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ದುರಸ್ತಿ ಮತ್ತು ನವೀಕರಣಕ್ಕೆ 52 ಲಕ್ಷ ರೂ., ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿರುವ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ತಿಗೆ ರೂ.23 ಲಕ್ಷ, ಹಿರೀಸಾವೆ ಹೋಬಳಿ ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ದುರಸ್ತಿ ಮತ್ತು ನವೀಕರಣಕ್ಕೆ 64.65 ಲಕ್ಷ ರೂ. ಮತ್ತು ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸಾ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ರೂ. ಸೇರಿದಂತೆ ಒಟ್ಟು 2.89 ಕೋಟಿ ರೂ. ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.
ಆರೋಗ್ಯ ಸಚಿವರು ಶಾಸಕರ ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದರು ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.