

ಮುಂಡಗೋಡ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಹಸೀಲ್ದಾರ್ ಶಂಕರ ಗೌಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸರ್ಕಾರ ಏಕಾಏಕಿ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಿಸಿದ್ದರಿಂದ ಜನಸಾಮಾನ್ಯರು, ರೈತರು ಮತ್ತು ಕೂಲಿ ಕಾರ್ಮಿಕರ ಮೇಲೆ ಬರೆ ಎಳೆದಂತಾಗಿದೆ. ಒಂದೆಡೆ ಸಾರಿಗೆ ನಿಗಮ ಮಂಡಳಿಗಳು ಲಾಭದಲ್ಲಿವೆ ಎಂದು ಸಾರಿಗೆ ಸಚಿವರು ಹೇಳುತ್ತಿದ್ದರು. ಲಾಭದಲ್ಲಿದ್ದರೆ ಪ್ರಯಾಣ ದರವನ್ನೇಕೆ ಹೆಚ್ಚಿಸಿದ್ದಾರೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ದರ ಕಡಿಮೆ ಮಾಡಬೇಕು. ಇಲ್ಲವೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು.
ಮುಂಡಗೋಡನಿಂದ ಹುಬ್ಬಳ್ಳಿಗೆ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸಬೇಕು. ಬಸ್ ಡಿಪೋ ಕಾರ್ಯಾರಂಭಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಗುತ್ತಿಗೆದಾರರ ಬಿಲ್ ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸೇನೆಯ ಸಂಸ್ಥಾಪಕ ಚಿದಾನಂದ ಹರಿಜನ, ಗೋವಿದಂಪ್ಪ ಬೆಂಡ್ಲಗಟ್ಟಿ, ಎಸ್ ಎಸ್ ಪಾಟೀಲ, ಬಸವರಾಜ ವಾಲ್ಮೀಕಿ, ಕೇಮಣ್ಣ ಲಮಾಣಿ ಇತರರಿದ್ದರು.