ಆದೇಶ ಮರುಪರಿಶೀಲನೆಗೆ ಮನವಿ, ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ನೆಲಮಂಗಲ ನಗರಸಭೆ ಸದಸ್ಯರ ಮನವಿ

08 Nela Ph 05 City Municipal Office
Published on

ನೆಲಮಂಗಲ: ಪುರಸಭೆಯಿಂದ ಮೇಲ್ದರ್ಜೆಗೇರಿಸಿರುವ ನೆಲಮಂಗಲ ನಗರಸಭೆಯ 31 ವಾರ್ಡ್‌ಗಳಿಗೆ 2 ತಿಂಗಳ ಒಳಗಾಗಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೆ ಈ ಆದೇಶ ಮರು ಪರಿಶೀಲಿಸುವಂತೆ ಒತ್ತಾಯಿಸಿ ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಲು ನಗರಸಭೆ ಸದಸ್ಯರು ಮುಂದಾಗಿದ್ದಾರೆ.

ಪುರಸಭೆಯ 23 ಸ್ಥಾನಗಳಿಗೆ 2019ರ ಜೂನ್ 1 ರಂದು ಚುನಾವಣೆ ನಡೆದು, ಜೆಡಿಎಸ್ 13, ಕಾಂಗ್ರೆಸ್ 7, ಬಿಜೆಪಿ 2, ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದರು. ರಾಜ್ಯದ ಪುರಸಭೆ, ನಗರಸಭೆ ಸೇರಿ ನಗರ ಪಾಲಿಕೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆ ಹೊರಡಿಸುವುದು ಸರ್ಕಾರದಿಂದ ವಿಳಂಬವಾಗಿದ್ದರಿಂದ ಪುರಸಭೆ ಆಡಳಿತ ಮಂಡಳಿ ರಚನೆ ಆಗಿರಲಿಲ್ಲ. ಇದರ ನಡುವೆ 2019ರಡಿ.26 ರಂದು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ನಗರಾಭಿವೃದ್ಧಿ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು.

ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 361(3) ರನ್ವಯ ಪುರಸಭೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಚುನಾಯಿತ ಸದಸ್ಯರನ್ನೇ ನಗರಸಭೆ ಸದಸ್ಯರಾಗಿ ಮೇಲ್ದರ್ಜೆಗೇರಿಸಿದ್ದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನಗರಸಭೆಗೆ ವಿಲೀನಗೊಂಡಿರುವ ಗ್ರಾಪಂಗಳ ಮಾಜಿ ಸದಸ್ಯರು ಹಾಗೂ ನಗರಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಕೆಲ ಆಕಾಂಕ್ಷಿತರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

ಹಲವು ಬಾರಿ ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪುರಸಭೆ ಸದಸ್ಯರನ್ನು ನಗರಸಭೆ ಸದಸ್ಯರಾಗಿ ಮೇಲ್ದರ್ಜೆಗೇರಿಸಿರುವುದು ಹಾಗೂ ನಗರಸಭೆ ವ್ಯಾಪ್ತಿಗೆ ವಿಲೀನಗೊಂಡಿದ್ದ ಪ್ರದೇಶಗಳಿಗೆ ಹೆಚ್ಚುವರಿ ಕೌನ್ಸಿಲರ್‌ಗಳನ್ನು ನೇಮಕ ಮಾಡಲು ಮುಂದಾಗಿದ್ದ ಸರ್ಕಾರದ ಕ್ರಮದ ವಿರುದ್ಧ ತೀರ್ಪು ನೀಡಿದೆ. ನಗರಸಭೆ 31 ವಾರ್ಡ್‌ಗಳಿಗೆ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶಿಸಿದೆ.

ಮೇಲ್ಮನವಿಗೆ ಮುಂದಾಗಿರುವ ಚುನಾಯಿತರು: ನಗರಸಭೆ ವ್ಯಾಪ್ತಿಯ ಕ್ಷೇತ್ರವಾರು ವಾರ್ಡ್‌ವಿಂಗಡಣೆ ಕುರಿತಂತೆ ಕರಡು ಪ್ರತಿಯನ್ನು ಮಾತ್ರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವುದು, ವಾರ್ಡ್‌ವಾರು ವಿಂಗಡಣೆ ಕರಡು ಪ್ರತಿ ಸಾರ್ವಜನಿಕವಾಗಿ ಪ್ರಚುರಪಡಿಸಬೇಕಿರುವುದು, ವಾರ್ಡ್ ವಿಂಗಡಣೆ ಕಾರ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆಗೆ ಕಾಲಾವಕಾಶ ನೀಡದಿರುವುದು, ವಾರ್ಡ್ ವಿಂಗಡಣೆ ಅಂತಿಮಗೊಂಡಿಲ್ಲದಿರುವುದು ಹಾಗೂ ವಾರ್ಡ್‌ವಾರು ಮೀಸಲಾತಿ ನಿಗದಿ ಪ್ರಕ್ರಿಯೆ ಬಾಕಿ ಇರುವ ಮಾಹಿತಿಯನ್ನು ಸಂಗ್ರಹಿಸಿರುವ ಚುನಾಯಿತ 23 ಮಂದಿ ಸದಸ್ಯರು ಹೈಕೋರ್ಟ್‌ನ ಆದೇಶವನ್ನು ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ.

ನ್ಯಾಯಕ್ಕಾಗಿ ಹೋರಾಟ: 2019 ಮೇ ನಲ್ಲಿ ಪುರಸಭೆ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಪುರಸಭೆ, ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ವಿಚಾರಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು, ರಾಜ್ಯಪಾಲರ ಅಂಗೀಕಾರ ಮಾತ್ರ ಬಾಕಿ ಇತ್ತು. ಪುರಸಭೆ ಚುನಾವಣೆಯನ್ನು ರದ್ದು ಮಾಡಿ ನಗರಸಭೆಗೆ ಚುನಾವಣೆ ನಡೆಸುವಂತೆ ಕೋರಿ ಕೆಲ ಮುಖಂಡರು ಚುನಾವಣಾ ಆಯೋಗದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಪುರಸಭೆ ಚುನಾವಣೆಗೆ ತಡೆಯಾಜ್ಞೆ ತಂದಿದ್ದರು. ಆದಾಗ್ಯೂ ಪುರಸಭೆಯ 23 ಸ್ಥಾನಗಳಿಗೆ ಆಯೋಗ ಚುನಾವಣೆ ನಡೆಸಿತ್ತು. ಈಗ ಚುನಾವಣೆಯಲ್ಲಿ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳು ಪ್ರಜಾಪ್ರಭುತ್ವದ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net