

ಮಂಡ್ಯ: ಜಿಲ್ಲೆಯಲ್ಲಿ ಎಲ್ಲ ಸಂಘ ಸಂಸ್ಥೆಗಳು ಜೂ.4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮದಿನವನ್ನು ಆಚರಿಸಬೇಕೆಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗಹಳ್ಳಿ ವೆಂಕಟೇಶ್ ಮನವಿ ಮಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾದರಿ ಆಡಳಿತ ನಡೆಸಿದರು. ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿ, ಗೆಜ್ಜೆಪೂಜೆಯಂತಹ ಅನಿಷ್ಟ ಪದ್ದತಿಗೆ ಒಡೆಯರ್ ಅವರು ತಿಲಾಂಜಲಿಯಾಡಿದರು. ಮಾತ್ರವಲ್ಲದೆ ಜನಪರ, ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರು ಮತ್ತು ಮಂಡ್ಯ ಜಿಲ್ಲೆಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ. ಜಿಲ್ಲೆಯ ಬರಡು ಭೂಮಿಯನ್ನು ಹಸಿರು ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ತಮ್ಮ ಕುಟುಂಬದವರ ಚಿನ್ನಾಭರಣ ಮಾರಿ ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಿ ಕೃಷಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಕಚೇರಿ ಮತ್ತು ಇತರ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲೆಡೆ ಅವರ ಜನ್ಮ ದಿನವನ್ನು ಆಚರಿಸಲು ಆದೇಶಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಮಾಡಿದ್ದೇವೆ. ಅವರು ಈ ಬಗ್ಗೆ ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಟ್ರಸ್ಟ್‌ನ ಸಚಿನ್, ಮಂಜು, ಶಿವಣ್ಣ, ಉಮೇಶ್ ಇದ್ದರು.