ಭೂ ಸ್ವಾಧೀನ ಪ್ರಕ್ರಿಯೆಗೆ ಮನವಿ

LXR
Published on

ಲಕ್ಷ್ಮೇಶ್ವರ: ಗದಗ-ಯಲವಗಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 150 ಕೋಟಿ ರೂ. ಮೀಸಲಿರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಕರ್ನಾಟಕ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಸದರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ ಎಂದರು.

ಹಿರಿಯರು ದೇಶದ ಸಂಪತ್ತು. ಅವರ ಅನುಭವ, ಮಾರ್ಗದರ್ಶನ ಸಮಾಜಕ್ಕೆ ದಾರಿದೀಪವಾಗಿದೆ. ಅವರು ನೀಡಿದ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳು ಬದುಕಿಗೆ ಮೂಲಾಧಾರವಾಗಿವೆ. ಕೃಷಿಯನ್ನೇ ಮೂಲಾಧಾರವಾಗಿಸಿಕೊಂಡ ಬಹುಸಂಖ್ಯಾತ ಪಂಚಮಸಾಲಿ ಸಮಾಜದವರು ಸ್ವಾಭಿಮಾನ, ಸಂಘಟನೆ, ಸ್ವಾವಲಂಬನೆ, ಸಹಕಾರ, ಸಹಬಾಳ್ವೆಗಳೆಂಬ ಉದಾತ್ತ ತತ್ವಗಳನ್ನು ಹೊಂದಿ ಇತರ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಶಾಸಕ ಸಿ.ಸಿ ಪಾಟೀಲ ಮಾತನಾಡಿ, ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆ ಎಲ್ಲರ ಮಂತ್ರವಾಗಬೇಕು. ಹಿರಿಯರನ್ನು ಗೌರವಿಸುವುದು ನಮ್ಮ ನಾಡಿನ ಸಂಪ್ರದಾಯ, ಸಂಸ್ಕಾರವಾಗಿದೆ. ಸಮಾಜ ನಮಗೇನು ಮಾಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬ ಆತ್ಮ ವಿಮರ್ಶೆ ನಮ್ಮೆಲ್ಲರ ಆದ್ಯತೆಯಾಗಬೇಕು. ಯಾವ ಸಮಾಜ ತನ್ನ ಉನ್ನತಿಗಾಗಿ ಶ್ರಮಿಸಿರುತ್ತದೆಯೋ ಅದರ ಋಣ ತೀರಿಸುವ ನೈತಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಸಮಾಜ ಇನ್ನಷ್ಟು ವಿಶಾಲವಾಗಿ ಬೆಳೆಯಲು ಸಾಧ್ಯ ಎಂದರು.

ವೈದ್ಯರತ್ನ ಪುರಸ್ಕೃತ ಡಾ.ಶ್ರೀಕಾಂತ ಕಾಟೇವಾಲೆ, ಕಾಯಕರತ್ನ ಡಾ. ಪೂರ್ಣಾಜಿ ಖರಾಟೆ ಸೇರಿ ಹಿರಿಯರು, ರೈತರು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿಯ ಶ್ರೀಚನ್ನವೀರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ಮಾಜಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಡಿ.ಬಿ. ಬಳಿಗಾರ, ಸಣ್ಣವೀರಪ್ಪ ಹಳೆಪ್ಪನವರ, ಗುರುನಾಥ ದಾನಪ್ಪನವರ, ಎಂ.ಐ. ಮುಳಗುಂದ, ಸಿ.ಆರ್. ಲಕ್ಕುಂಡಿಮಠ, ಸಿ.ಜಿ. ಹಿರೇಮಠ, ಜಿ.ವಿ. ಪಾಟೀಲ, ಅಶೋಕ ಪಲ್ಲೇದ, ಸರೋಜಕ್ಕ ಬನ್ನೂರ, ಎನ್.ವಿ. ಹೇಮಗಿರಿಮಠ, ನಿಂಗಪ್ಪ ಬನ್ನಿ. ಸಿ.ವಿ. ಕೋಲಕಾರ, ಶಕುಂತಲಾ ಅಳಗವಾಡಿ, ಡಿ.ವೈ. ಹುನಗುಂದ. ಈರಣ್ಣ ಕಟಗಿ, ಎಸ್.ಎನ್. ಅಂಬಿಗೇರ ಇತರರಿದ್ದರು.

ಮೆಹಬೂಬ್ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಕುಲಕರ್ಣಿ ಸ್ವಾಗತಿಸಿದರು. ಎಂ.ಎಸ್. ಚಾಕಲಬ್ಬಿ, ಸ್ನೇಹಾ ಹೊಟ್ಟಿ, ಸಂತೋಷ ಕಾರಬಾರಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net