ಮಂಡ್ಯ ನಗರದ ಉದ್ಯಾನಗಳ ಅಭಿವೃದ್ಧಿಪಡಿಸಿ: ನಗರಸಭೆಗೆ 15 ದಿನದ ಗಡುವು ನೀಡಿದ ಕನ್ನಡಸೇನೆ

2
Published on

ಮಂಡ್ಯ: ನಗರದ ಉದ್ಯಾನಗಳ ಅಭಿವೃದ್ಧಿ ಹಾಗೂ ದುರಸ್ತಿಯಲ್ಲಿರುವ ವ್ಯಾಯಾಮ ಉಪಕರಣಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಸಂಘಟನೆಯಿಂದ ಗುರುವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ಬಳಿಕ ಪೌರಾಯುಕ್ತ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು. ನಗರದಲ್ಲಿ 35ಕ್ಕೂ ಹೆಚ್ಚು ಉದ್ಯಾನಗಳು ಇವೆ. ಆದರೆ ಬಹುತೇಕ ಮೂಲ ಸೌಕರ್ಯವಿಲ್ಲದೆ ವಂಚಿತವಾಗಿವೆ. ಉದ್ಯಾನಗಳಲ್ಲಿ ಎಲ್ಲ ವರ್ಗದ ಜನರು ವಿಹಾರ ಮಾಡುತ್ತಾರೆ. ಅವರ ಆರೋಗ್ಯದ ದೃಷ್ಟಿಯನ್ನಿಟ್ಟುಕೊಂಡು ರಾಜ್ಯ ಸರ್ಕಾರ ಕೆಲ ವರ್ಷದ ಹಿಂದೆ 15ಕ್ಕೂ ಹೆಚ್ಚು ಉದ್ಯಾನಗಳಲ್ಲಿ ಎಲ್ಲ ವಯಸ್ಸಿನ ಜನರ ಆರೋಗ್ಯಕ್ಕಾಗಿ ವ್ಯಾಯಾಮ ಉಪಕರಣಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಬೋರೇಗೌಡ ಉದ್ಯಾನ, ಸುಶೀಲಮ್ಮ ಉದ್ಯಾನ, ಶಿವನಂಜಪ್ಪ ಉದ್ಯಾನ, ಆನೆ ಪಾರ್ಕ್ ಸೇರಿದಂತೆ 10ಕ್ಕೂ ಹೆಚ್ಚು ಉದ್ಯಾನಗಳಲ್ಲಿ ಈಗಾಗಲೇ ಅಳವಡಿಸಿರುವ ಉಪಕರಣಗಳು ಮುರಿದು, ತುಕ್ಕು ಹಿಡಿದು ಕಳೆದ 2 ವರ್ಷಗಳಿಂದ ದುರಸ್ತಿಯಲ್ಲಿವೆ. ವಿಹಾರ ಮಾಡುವ ಜನರು ಬಹಳಷ್ಟು ಬಾರಿ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉದ್ಯಾನಗಳಿಗೆ ಕುಡಿಯುವ ನೀರಿನ ಹಾಗೂ ಶೌಚಾಗೃಹ, ಸಸಿಗಳ ನೆಡುವಿಕೆ ಇನ್ನು ಮುಂತಾದ ಮೂಲ ಸೌಕರ್ಯಗಳನ್ನು ಜಿಲ್ಲಾಡಳಿತ ಜನರ ಆರೋಗ್ಯಕ್ಕಾಗಿ ಆಳವಡಿಸಿರುವ ಉಪಕರಣಗಳನ್ನು ಸರಿಪಡಿಸಬೇಕು. ಇನ್ನು 15 ದಿನದೊಳಗೆ ಸರಿಪಡಿಸದಿದ್ದರೆ ಮಂಡ್ಯ ನಗರದ ಜನರ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೋರೇಗೌಡ ಉದ್ಯಾನದ ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ರಾಜೇಗೌಡ. ಕನ್ನಡ ಸೇನೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿ ಅಂದಾನಿ, ಮಂಡ್ಯ ನಗರ ಅಧ್ಯಕ್ಷ ಶಿವಾಲಿ, ನಗರ ಕಾರ್ಯದರ್ಶಿ ರಾಜೇಶ್, ಕಾರ್ಯಾಧ್ಯಕ್ಷೆ ಜಯಮ್ಮ, ಬಿ.ಎಂ.ಅಪ್ಪಾಜಪ್ಪ, ಹೊಸಳ್ಳಿ ಶೇಖರ್, ಮರಿಸ್ವಾಮಿ, ಅಂಕೇಗೌಡ, ಶ್ರೀರಾಮ್, ಮಂಜುನಾಥ್, ಸುಬ್ಬೇಗೌಡ, ಶಿವರಾಂ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net