

ಮುಂಡಗೋಡ: ತಾಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿ ಬೆಳೆ ಹಾನಿಯಾಗಿರುವ ಕಾರಣ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡುವಂತೆ ಒತ್ತಾಯಿಸಿ ಇಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ವತಿಯಿಂದ ಮಂಗಳವಾರ ತಹಸೀಲ್ದಾರ್ ಶಂಕರ ಗೌಡಿ ಮುಖಾಂತರ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಕಾರ್ಯವ್ಯಾಪ್ತಿಯಲ್ಲಿ ಇರುವ ರೈತರು ಸಂಘದಿಂದ ಬೆಳೆ ಸಾಲ ಪಡೆದು ಬೆಳೆ ವಿಮೆಯನ್ನು ಅಳವಡಿಸಿಕೊಂಡಿದ್ದಾರೆ. ಭತ್ತದ ಸಾಲ 1650 ಎಕರೆ, ಗೋವಿನಜೋಳ 745 ಎಕರೆ, ಅಡಕೆ 810 ಎಕರೆಗಳಿಗೆ ಸಾಲ ನೀಡಿ ವಿಮಾ ಅಳವಡಿಸಲಾಗಿದೆ. ಆದರೆ, ಮಳೆಯ ಪ್ರಮಾಣ ಹೆಚ್ಚಾಗಿ ಗೋವಿನಜೋಳ, ಭತ್ತ ಹಾಗೂ ಅಡಕೆ ಹೂವು ಕಾಯಿಗಳಿಗೆ ಸಾಕಷ್ಟು ಹಾನಿಯಾಗಿದೆ. ಆದ್ದರಿಂದ ರೈತರ ಜಮೀನುಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ಮಾಡಿ ತ್ವರಿತಗತಿಯಲ್ಲಿ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಮಂಜುನಾಥ ವೆರ್ಣೆಕರ, ಉಪಾಧ್ಯಕ್ಷ ಸೋಮ್ಲಪ್ಪ ಲಮಾಣಿ, ಸದಸ್ಯರಾದ ಸಂಪತಕುಮಾರ ಕ್ಯಾಮಣಕೇರಿ,ಬಾಬು ತಳವಾರ, ಫಕೀರಪ್ಪ ಗೌಳಿ ಸಂಘದ ಅಧಿಕಾರಿಗಳು ಇದ್ದರು.