ಕಾಡುಪ್ರಾಣಿ ಹಾವಳಿ ನಿಯಂತ್ರಣಕ್ಕೆ ಮನವಿ

KMT-Katagal
Published on

ಕುಮಟಾ: ತಾಲೂಕಿನ ಅಳಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೋಟ, ಗದ್ದೆಗಳ ಮೇಲೆ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಅಡಕೆ, ತೆಂಗು, ಬಾಳೆ ಗಿಡಗಳು ನಾಶವಾಗುತ್ತಿವೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಮುಂದಾಳತ್ವದಲ್ಲಿ ರೈತರು ಭಾನುವಾರ ಕತಗಾಲ ವಲಯ ಅರಣ್ಯ ಕಚೇರಿಗೆ ತೆರಳಿ ಸಮಸ್ಯೆ ತೋಡಿಕೊಂಡರು.

ಅಳಕೋಡ ಗ್ರಾಪಂ ಸದಸ್ಯರಾದ ಶ್ರೀಧರ್ ಪೈ, ಮಹೇಶ ದೇಶಭಂಡಾರಿ, ಶ್ರೀಧರ್ ಗೌಡ ನೇತೃತ್ವದಲ್ಲಿ ರೈತರಾದ ಶ್ರೀಧರ ಭಟ್ಟ, ಭಗೀರಥ ಶಾನಭಾಗ, ವಿಶ್ವನಾಥ ಹೆಗಡೆ ಮುಂತಾದವರು ಆರ್‌ಎಫ್‌ಒ ಪ್ರೀತಿ ನಾಯ್ಕ ಅವರನ್ನು ಭೇಟಿಯಾಗಿ ಕಾಡು ಹಂದಿಯಿಂದ ತೆಂಗು, ಅಡಕೆ, ಬಾಳೆಗಿಡಗಳು ನಾಶವಾಗುತ್ತಿವೆ. ಮಂಗ, ಕೇಶ ಅಳಿಲುಗಳು(ಕೆಸಾಳೆ) ತೆಂಗು, ಬಾಳೆಯ ಜತೆಗೆ ಗೇರು ಬೆಳೆಯನ್ನೂ ಹಾಳು ಮಾಡುತ್ತಿದ್ದು ರೈತರ ಬದುಕು ಸಂಕಷ್ಟದಲ್ಲಿದೆ.

ಇದಲ್ಲದೆ ಜನವಸತಿ ಪ್ರದೇಶದಲ್ಲಿ ವಿಷಕಾರಿ ಜಂತುಗಳ ಹಾವಳಿಯು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಭಯದಲ್ಲೇ ಬದುಕುವ ಪರಿಸ್ಥಿತಿ ಬಂದಿದೆ. ಕಾಡುಪ್ರಾಣಯಿಂದ ಉಂಟಾದ ಬೆಳೆಹಾನಿಗೆ ಅರಣ್ಯ ಇಲಾಖೆ ನೀಡುತ್ತಿರುವ ಅತ್ಯಲ್ಪ ಪ್ರಮಾಣದ ಪರಿಹಾರ ಧನದ ಬದಲು ಇಂಥ ಪ್ರಾಣಿಗಳನ್ನು ನಿಯಂತ್ರಿಸುವತ್ತ ವಿಶೇಷ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಕ್ರಿಯಿಸಿದ ಆರ್‌ಎಫ್‌ಒ ಪ್ರೀತಿ ನಾಯ್ಕ, ಕತಗಾಲ ಅರಣ್ಯ ವಲಯದ ದಟ್ಟ ಅರಣ್ಯ ಪ್ರದೇಶದ ಅಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ರೈತ ಸಮುದಾಯವು ಎದುರಿಸುತ್ತಿರುವ ಕಾಡು ಪ್ರಾಣಿ ಹಾವಳಿಯ ಸಮಸ್ಯೆಯನ್ನು ಅರಿತಿದ್ದೇವೆ. ಸಮಸ್ಯೆ ಬಗೆಹರಿಸುವುದಕ್ಕೆ ನಮ್ಮಿಂದಾದ ಸಹಕಾರ ನೀಡುತ್ತೇವೆ. ಬೆಳೆನಾಶದ ಸ್ಥಳಕ್ಕೆ ಕೂಡಲೇ ಅರಣ್ಯ ಸಿಬ್ಬಂದಿ ಕಳುಹಿಸಿ ಪರಿಶೀಲಿಸುತ್ತೇವೆ. ಹಾಗೆಯೇ ಸಾರ್ವಜನಿಕರ ಸಹಕಾರದೊಂದಿಗೆ ಕಾಡುಪ್ರಾಣಿ ಕಾಟದ ವಿರುದ್ಧ ತುರ್ತು ಕಾರ್ಯ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net