ಬೀದಿ ನಾಯಿಗಳ ನಿಯಂತ್ರಣಕ್ಕೆ ಮನವಿ

26 MND 1
Published on

ಮುಂಡಗೋಡ: ನಂದೀಶ್ವರ ನಗರದಲ್ಲಿ ಬೀದಿ ನಾಯಿಗಳ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಂದೀಶ್ವರನಗರದ ಮಹಿಳೆಯರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ನಂದೀಶ್ವರನಗರದಲ್ಲಿ ಬೀದಿನಾಯಿಗಳ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ನಂದೀಶ್ವರನಗರದಲ್ಲಿ ಮೂವರು ಮಕ್ಕಳಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ನಂದೀಶ್ವರ ನಗರದಲ್ಲಿ ಭಯದ ವಾತಾವರಣ ಉಂಟಾಗಿದೆ. ಮಹಿಳೆಯರು, ಮಕ್ಕಳು ಹಾಗೂ ಪುರುಷರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ನಂದೀಶ್ವರನಗರದಲ್ಲಿ ಹೆಚ್ಚಾಗಿರುವ ಬೀದಿನಾಯಿಗಳು ಹಾಗೂ ಹುಚ್ಚುನಾಯಿಗಳ ಹಾವಳಿ ತಡೆಗಟ್ಟಿ ಸೂಕ್ತ ಕ್ರಮ ಕೈಗೊಳ್ಳಬೇಕು.

ನಂದೀಶ್ವರ ನಗರದಲ್ಲಿ ಚರಂಡಿಗಳಲ್ಲಿ ಕೊಳಚೆ ತುಂಬಿಕೊಂಡು ದುರ್ವಾಸನೆಯಿಂದಾಗಿ ಹಾಗೂ ಸೊಳ್ಳೆಗಳ ಕಚ್ಚುವಿಕೆಯಿಂದಾಗಿ ಜನರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ನಾನಾ ಕಾಯಿಲೆಗಳಿಂದ ಬಳಲುವಂತಾಗಿದೆ. ಸಂಬಂಧಪಟ್ಟ ವಾರ್ಡ್ ಸದಸ್ಯರು ನಂದೀಶ್ವರನಗರಕ್ಕೆ ಬರುವುದೇ ಇಲ್ಲ. ಯಾವುದೇ ಕುಂದು ಕೊರತೆ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರ ನಿರ್ಲಕ್ಷ ಧೋರಣೆಯಿಂದಾಗಿ ನಂದೀಶ್ವರನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಂದೀಶ್ವರ ನಗರದ ಪರಿಸ್ಥಿತಿಯನ್ನು ವೀಕ್ಷಿಸಿ ಚರಂಡಿಯನ್ನು ಸ್ವಚ್ಛ ಮತ್ತು ಹಾಳಾಗಿದ್ದನ್ನು ಸರಿಪಡಿಸಿ ನಗರದ ಅಭಿವೃದ್ಧಿ ಒತ್ತು ಕೊಡಬೇಕು. ಒಂದು ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಆಶಾ ರಾವ್, ಲಕ್ಷ್ಮೀ ದೈವಜ್ಞ, ಜ್ಯೋತಿ ಉಪ್ಪುಂದ, ಜಯಲಕ್ಷ್ಮೀ ಮತ್ತಿಗಟ್ಟಿ, ರಶ್ಮಿ ಪಾಟೀಲ, ಪ್ರೇಮಾ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net