

ನರಗುಂದ: ಕುಷ್ಟಗಿ- ಘಟಪ್ರಭಾ ರೈಲು ಮಾರ್ಗ ನಿರ್ಮಾಣ ಕುರಿತು ಕೇಂದ್ರದ ಸಚಿವರೊಡನೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ ಅವರಿಗೆ ತಾಲೂಕು ರೈಲು ಮಾರ್ಗರಚನೆ ಹೋರಾಟ ಸಮಿತಿ ಸದಸ್ಯರು ಬುಧವಾರ ಮನವಿ ಸಲ್ಲಿಸಿದರು.
ಮಹದಾಯಿ ಮಹಾವೇದಿಕೆ ಅಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ರೈಲು ಮಾರ್ಗದಿಂದ ಶಿಕ್ಷಣ, ಸಾರಿಗೆ, ವಾಣಿಜ್ಯೋದ್ಯಮ ಹಾಗೂ ಸವದತ್ತಿ ಭಾಗದಲ್ಲಿ ಐತಿಹಾಸಿಕ ಎಲ್ಲಮ್ಮನ ಗುಡ್ಡ ಹಾಗೂ ಬದಾಮಿ ಬನಶಂಕರಿದೇವಿ ದೇವಸ್ಥಾನಗಳಿಗೆ ನಿತ್ಯ ಭೇಟಿ ನೀಡುವ ಸಾವಿರಾರು ಭಕ್ತರಿಗೆ ಅನುಕೂಲವಾಗಲಿದೆ.
ಮಾರ್ಗದಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿವೆ. ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಹತ್ತಿ, ಜೋಳ, ಗೋಧಿ, ಹೆಸರು, ಕಡಲೆ, ವಿವಿಧ ಎಣ್ಣೆ ಕಾಳುಗಳ ಸಾಗಣೆಗೆ ಸದ್ಯದ ಸ್ಥಿತಿಯಲ್ಲಿ ರೈತರು ಪ್ರಯಾಸಪಡುವಂತಾಗಿದೆ. ರೈಲು ಮಾರ್ಗ ರಚನೆಗೊಂಡಲ್ಲಿ ರೈತರಿಗೆ ಮತ್ತು ಸಾರ್ವಜನಕರಿಗೆ ಅನುಕೂಲವಾಗಲಿದೆ ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ, ಎಂ.ಎಸ್. ಕರಿಗೌಡ್ರ, ರಾಘವೇಂದ್ರ ಗುಜಮಾಗಡಿ, ರಂಗನಾಥ ನಡುವಿನಮನಿ, ಈರಣ್ಣ ಸೊಪ್ಪೀನ, ಪ್ರವೀಣ ಯರಗಟ್ಟಿ, ಶರಣಯ್ಯ ಮಠಪತಿ, ಮಾರುತಿ ಬೋಸಲೆ, ಜೆ.ಆರ್. ಕದಂ, ಗೌಸ್ ತಾಲೀಮನವರ, ವಿಠಲ ಮುಧೋಳೆ ಇತರರು ಉಪಸ್ಥಿತರಿದ್ದರು.