

ಶಿರಸಿ: ಮಾಂಸದಂಗಡಿಗಳ ತ್ಯಾಜ್ಯ ವಿಲೇವಾರಿ ಮಾಡಿ, ಅಂಗಡಿಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಹೂವಿನಕೊಪ್ಪಲ ಕೇರಿ ಗ್ರಾಮಸ್ಥರು ಬನವಾಸಿ ಗ್ರಾಮ ಪಂಚಾಯಿತಿಗೆ ಬುಧವಾರ ಮನವಿ ಸಲ್ಲಿಸಿದರು.
ಬನವಾಸಿಯ ಮಾಂಸದಂಗಡಿಕಾರರು ಹೂವಿನಕೊಪ್ಪಲ ಕೇರಿ ಸಮೀಪದ ಉರ್ದು ಶಾಲೆಯ ಪಕ್ಕದಲ್ಲಿನ ಜಾಗದಲ್ಲಿ ತ್ಯಾಜ್ಯ ಹಾಕುತ್ತಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುರ್ನಾತ ಹರಡಿದೆ. ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ಹಲವಾರು ಬಾರಿ ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತ್ಯಾಜ್ಯ ಹಾಕುವುದರಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಾಂಸದಂಗಡಿಯ ತ್ಯಾಜ್ಯವನ್ನು ಆ ಪ್ರದೇಶದಲ್ಲಿ ಹಾಕದಂತೆ ಕಟ್ಟುನಿಟ್ಟಾಗಿ ಆದೇಶ ಮಾಡಬೇಕು. ತ್ಯಾಜ್ಯ ಹಾಕುವ ಅಂಗಡಿಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಗ್ರಾಪಂ ಕಾರ್ಯದರ್ಶಿ ರಾಘವೇಂದ್ರ ಪ್ರತಿಕ್ರಿಯಿಸಿ, ಪಿಡಿಒ ರಜೆಯಲ್ಲಿದ್ದಾರೆ. ತಕ್ಷಣವೇ ಈ ಕುರಿತು ಸಭೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.
ಡಿಎಸ್‌ಎಸ್‌ನ ಶಿವಾಜಿ ಕಾಳೇರಮನೆ, ಗ್ರಾಪಂ ಸದಸ್ಯರಾದ ಜ್ಯೋತಿ ಚನ್ನಯ್ಯ, ಫಝಲ್ ರೆಹಮಾನ ಕಲೆಗಾರ, ಪ್ರಮುಖರಾದ ವಸಂತ ಇಳಿಗೇರ, ಅಸ್ಲಂ ರೌಫ್‌ಸಾಬ್, ಸಂಜಯ ಇಳಿಗೇರ ಇತರರು ಇದ್ದರು.