

ಲಿಂಗದಹಳ್ಳಿ: ಭಾರತೀಯ ಸೇನೆಯಲ್ಲಿ ಬ್ಲಾಕ್‌ಕ್ಯಾಟ್ ಕಮ್ಯಾಂಡರ್ ಆಗಿದ್ದ ತಣಿಗೆಬೈಲು ಗ್ರಾಮದ ಕೆ.ದೀಪಕ್, ಕುಣಿಗಲ್ ಸಮೀಪದ ಅಮ್ರತೂರು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ಅಪಘಾತದಲ್ಲಿ ಮೃತಪಟ್ಟು ಮೇ 24ಕ್ಕೆ ಸರಿಯಾಗಿ ಎರಡು ವರ್ಷ ಕಳೆದರೂ ಸಹ ಅಮ್ರತೂರು ಠಾಣಾಧಿಕಾರಿಗಳು ಚಾರ್ಜ್‌ಶೀಟ್ ಹಾಕಿ ಕೋರ್ಟ್‌ಗೆ ಸಲ್ಲಿಸದೇ ಸತಾಯಿಸುತ್ತಿದ್ದಾರೆ. ಮೃತ ಯೋಧ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಮೃತ ಯೋಧನ ತಂದೆ ಟಿ.ಕೃಷ್ಣಮೂರ್ತಿ ದೂರಿದರು.
ಮೃತ ಯೋಧ ಕೆ.ದೀಪಕ್ ಸ್ಮರಣಾರ್ಥ ತಣಿಗೆಬೈಲು ಗ್ರಾಮದ ಸಮೀಪ ನಿರ್ಮಾಣ ಮಾಡಿರುವ ಸ್ಮಾರಕ ಸಮೀಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೂ ಪೊಲೀಸರು ನಮ್ಮಿಂದ ರೀ ಸ್ಟೇಟ್‌ಮೆಂಟ್ ಪಡೆದಿಲ್ಲ. ಆದರೆ ಕುಣಿಗಲ್ ಸರ್ಕಲ್ ಇನ್ಸ್‌ಪೆಕ್ಟರ್ ಚಾರ್ಜ್‌ಶೀಟ್ ನಂಬರ್ 23/2024ರಂತೆ 20-04-2024ರಂದು ಚಾರ್ಜ್ ಶೀಟ್ ಹಾಕಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ 25-05-2024ರಲ್ಲಿ ಹಿಂಬರಹ ನೀಡಿ ಮೃತ ಯೋಧನ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಾರಣ ಹೇಳಿ ನಮ್ಮನ್ನು ಅಲೆದಾಡಿಸುತ್ತಿದ್ದಾರೆ ಎಂದು ತಿಳಿಸಿದರು.
ಮೃತ ಯೋಧ ಬೈಕ್ ಅಪಘಾತದಲ್ಲಿ ಮೃತಪಟ್ಟ ವೇಳೆ ಯಡಿಯೂರಿನ ಹೇಮಾವತಿ ಸರ್ಕಲ್ ಮೂಲಕ ಬೈಕ್‌ನಲ್ಲಿ ಹಾದು ಹೋಗಿರುವುದು ಸರ್ಕಲ್‌ನಲ್ಲಿ ಇರುವ ಹೆಚ್‌ಪಿ ಗ್ಯಾಸ್ ಏಜೆನ್ಸಿ ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅದರೆ ಈ ಕ್ಯಾಮರಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ಅಲ್ಲದೇ ಮೃತ ಯೋಧ ಕೆ.ದೀಪಕ್ ತಲೆಗೆ ಹಾಕಿದ್ದ ಹೆಲ್ಮೆಟ್‌ನಲ್ಲಿ ಅಳವಡಿಸಿದ್ದ ಕ್ಯಾಮರವೂ ಕಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಪಕ್‌ನ ಮೊಬೈಲ್‌ನಲ್ಲಿದ್ದ ವಿವರಗಳಿಂದ ಕಾರಣ ಪತ್ತೆ ಹಚ್ಚುವ ಅವಕಾಶವಿದ್ದರೂ ಪ್ರಕರಣ ದಾಖಲಾಗಿ ಎರಡು ವರ್ಷ ಕಳೆದರೂ ರಹಸ್ಯವಾಗಿ ಉಳಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಮ್ರತೂರು ಪೊಲೀಸರು ಅಪಘಾತ ಪ್ರಕರಣಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.