

ದಾಂಡೇಲಿ: ನಗರದಲ್ಲಿ ಅ. 12ರಂದು ಜರುಗಲಿರುವ ದಸರಾ ಹಬ್ಬ, ದಾಂಡೇಲಪ್ಪ ಜಾತ್ರೆ ಹಾಗೂ ಕಾಗದ ಕಾರ್ಖಾನೆ ಸಿಡಿ ಮದ್ದಿನ ಕಾರ್ಯಕ್ರಮವನ್ನು ಅತ್ಯಂತ ಶಾಂತಿಯುತವಾಗಿ ಅದ್ದೂರಿಯಾಗಿ ಆಚರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ತಹಸೀಲ್ದಾರ ಶೈಲೇಶ ಪರಮಾನಂದ ಮನವಿ ಮಾಡಿದರು.
ನಗರದ ಡಿಲಕ್ಸ್ ಸಭಾಂಗಣದಲ್ಲಿ ದಸರಾ ನಿಮಿತ್ತ ಗುರುವಾರ ಕರೆದಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿಯೂ ಸ್ಥಳೀಯ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ, ದಾಂಡೇಲಪ್ಪ ಜಾತ್ರಾ ಸಮಿತಿ ಹಾಗೂ ಆಲೂರ ಗ್ರಾಮ ಪಂಚಾಯಿತಿ ಮತ್ತು ವಿವಿಧ ಸಂಘಟನೆಗಳ ಸಹಕಾರದಿಂದ ದಸರಾ ಹಬ್ಬವನ್ನು ಉತ್ತಮ ರೀತಿಯಲ್ಲಿ ಆಚರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಖ್, ಪೌರಾಯುಕ್ತ ರಾಜಾರಾಂ ಪವಾರ, ಡಿವೈಎಸ್ಪಿ ಶಿವಾನಂದ ಎನ್.ಎಂ. ಮಾತನಾಡಿ, ದಸರಾ ನಿಮಿತ್ತ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲ ರೀತಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಸ್ತೆಗಳ ಸುಧಾರಣೆ ಹಾಗೂ ಜಾತ್ರೆ ಸಂದರ್ಭದಲ್ಲಿ ದಾರಿ ದೀಪಗಳ ವ್ಯವಸ್ಥೆ ಕುರಿತು ಕೇಳಲಾದ ಪ್ರಶ್ನೆಗಳಿಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸಂತೋಷ ಅಥಣಿ ಮತ್ತು ಹೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ದೀಪಕ ನಾಯ್ಕ, ಸಿಪಿಐ ಭೀಮಣ್ಣ ಸೂರಿ ದಸರಾ ಉತ್ಸವಕ್ಕೆ ಎಲ್ಲ ರೀತಿಯ ಕ್ರಮಕೈಕೊಳ್ಳಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಆಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರಜಾನ, ದಾಂಡೇಲಪ್ಪ ದೇವಸ್ಥಾನ ಸಮಿತಿಯ ಗುರುದತ್ತ ಮಿರಾಶಿ, ಕಾಗದ ಕಾರ್ಖಾನೆಯ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ, ರಾಘವೇಂದ್ರ ಜೆ.ಆರ್., ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಇತರರು ಉಪಸ್ಥಿತರಿದ್ದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ನಗರಸಭೆ ಸದಸ್ಯರು, ಅರಣ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮೀಣ ವಿಭಾಗದ ಪಿಎಸ್ಐ ಕೃಷ್ಣಗೌಡ ಅರಿಕೇರಿ ಕಾರ್ಯಕ್ರಮ ನಿರ್ವಹಿಸಿದರು.