

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಜಲ ದಿನಾಚರಣೆ ಅಂಗವಾಗಿ ನಗರದಲ್ಲಿನ ಎಲ್ಲ ಕೆರೆಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಆಗ್ರಹಿಸಿ ಪರಿಸರಕ್ಕಾಗಿ ನಾವು ಸಂಘಟನೆ ವತಿಯಿಂದ ಸಹಿ ಸಂಗ್ರಹ ಅಭಿಯಾನ ಮೂಲಕ ಜಿಲ್ಲಾಧಿಕಾರಿಗೆ ಸೋಮವಾರ ಮನವಿಪತ್ರ ಸಲ್ಲಿಸಲಾಯಿತು.
ನಗರದ ಸಾಕಷ್ಟು ಕೆರೆಗಳು ಈಗಾಗಲೇ ನಾಶವಾಗಿದ್ದು, ಇದ್ದ ಕೆರೆಗಳು ಅವನತಿಯತ್ತ ಸಾಗಿವೆ. ಅಂತಹ ಕೆರೆಗಳಿಗೆ ಮರು ಜೀವ ನೀಡುವ ಕೆಲಸವಾಗಬೇಕು. ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆರೆಗಳ ಅಭಿವೃದ್ಧಿಯಿಂದ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಆಗುವುದನ್ನು ತಪ್ಪಿಸಬಹುದು. ಇಲ್ಲವಾದಲ್ಲಿ ನೀರಿನ ಕೊರತೆ ಆಗಲಿದೆ. ಇದಲ್ಲದೆ ಜನರು ಕೆರೆಗಳನ್ನು ಒತ್ತುವರಿ ಮಾಡುವ ಕೆಲಸವೂ ಆಗಲಿದೆ. ಇದನ್ನು ತಪ್ಪಿಸಲು ಕೆರೆಗಳ ಅಳತೆ ಮಾಡಿ ಹದ್ದು ಗುರುತಿಸುವ ಕೆಲಸವೂ ನಡೆಯಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿನ ಎಲ್ಲ ಕೆರೆಗಳ ರಕ್ಷಣೆ ಜತೆಗೆ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬೀಳುವ ಮಳೆ ನೀರು ಸರಾಗವಾಗಿ ಕೆರೆಗೆ ಸೇರುವ ವ್ಯವಸ್ಥೆ, ಕೆರೆ ದಂಡೆ ಮೇಲೆ ಗಿಡಗಳನ್ನು ನೆಡುವುದು, ಕೆರೆಗಳಿಗೆ ಚರಂಡಿ ನೀರು, ತ್ಯಾಜ್ಯ ಸೇರದಂತೆ ಎಚ್ಚರವಹಿಸಬೇಕು. ಪ್ರತಿ ಕೆರೆ ಸ್ವಚ್ಛವಾಗಿಡಲು ಹಾಗೂ ಉಸ್ತುವಾರಿಗೆ ಆಯಾ ಇಲಾಖೆಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಬಟ್ಟೆಯ ಮೇಲೆ ಸಂಗ್ರಹಿಸಿದ್ದ 200ಕ್ಕೂ ಹೆಚ್ಚು ಜನರ ಸಹಿ ಹಾಗೂ ಮನವಿಪತ್ರವನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಸಲ್ಲಿಸಲಾಯಿತು. ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಪರಿಸರಕ್ಕಾಗಿ ನಾವು ಸಂಘಟನೆಯ ಕವಿತಾ ಎಲೇದಳ್ಳಿ, ಸರಸ್ವತಿ ಪೂಜಾರ, ನಿರ್ಮಲಾ ಹಿರೆಗೌಡರ, ಶ್ರೀಕಾಂತ ಹಾವನೂರ, ಬಸವಪ್ರಭು ಹೊಸಕೇರಿ, ಗೌರಿ ಮಾದನಬಾವಿ, ಪ್ರಕಾಶ ಭಟ್, ರಾಜೇಂದ್ರ ಪೋದ್ದಾರ, ಶ್ರೀಶೈಲಗೌಡ ಕಮತರ, ಆರ್.ಜಿ. ತಿಮ್ಮಾಪುರ, ಸಿಂಕದರ್ ದೇಸಾಯಿ, ಸಿ.ಎನ್. ಕಾಮತ್, ಭಾರತಿ ಸುಧಾಕರ್, ಬಸನಗೌಡ್ ಪಾಟೀಲ್, ಮಾಧುರಿ ಚಿಕ್ಕೋಡಿ, ಇತರರು ಇದ್ದರು.