

ಎಚ್.ಡಿ.ಕೋಟೆ : ಅಕ್ರಮವಾಗಿ ಕಾಮಗಾರಿಗೆ ಬಿಲ್ ಪಾವತಿ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಕ್ರಮ ಜರುಗಿಸುವಂತೆ, ಕಾಮಗಾರಿ ಮಾಡಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಪಂಚಾಯಿತಿ ಸದಸ್ಯೆ ಸೇರಿದಂತೆ ಗ್ರಾಮಸ್ಥರು ಗುರುವಾರ ತಾಲೂಕಿನ ಹೊಮ್ಮರಗಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಇತ್ತೀಚೆಗೆ ಪ್ರತಿಭಟನೆ ಮಾಡಿದರು.
ಹೊಮ್ಮರಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಕವಿತಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಕಾಮಗಾರಿ ನಡೆಯದೆ ಕೆಲವು ಕಾಮಗಾರಿಗಳಿಗೆ ಪಂಚಾಯಿತಿ ವತಿಯಿಂದ ಬಿಲ್ ಪಾವತಿ ಮಾಡಿದ್ದಾರೆ. ಜತೆಗೆ ಕಳಪೆ ಕಾಮಗಾರಿಗೂ ಕೂಡ ಬಿಲ್ ಪಾವತಿ ಮಾಡಿದ್ದು ಸಂಪೂರ್ಣ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ನಮ್ಮ ಪಂಚಾಯಿತಿ ಸದಸ್ಯ ಮುರಳಿ ಅವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಕ್ರಮ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಿಸಿಕೊಳ್ಳುವ ಮೂಲಕ ಲೋಪವೆಸಗಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳಿಗೆ ಹೆದರಿಸುವ ಕೆಲಸ ಮಾಡುತ್ತಿದ್ದು ಶಾಸಕರು ಮುರಳಿ ಅವರಿಗೆ ತಿಳಿವಳಿಕೆ ಹೇಳುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ನಂತರ ತಾಲೂಕು ಎಡಿ ರಘುನಾಥ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಯಪ್ರಕಾಶ್, ಮುಖಂಡರಾದ ನಂದೀಶ್, ಲಿಂಗರಾಜು, ರೇಖಾ, ಶಿವಣ್ಣ, ಕೋಳಿ ಸೋಮು, ಮಹಾದೇವ ನಾಯಕ, ಮಂಗಳಮ್ಮ, ಮಲ್ಲಿಗಮ್ಮ, ಸಣ್ಣತಾಯಮ್ಮ, ಮರಿಸಿದ್ದಮ್ಮ, ಚಿಕ್ಕತಾಯಮ್ಮ ಇದ್ದರು.